ನವದೆಹಲಿ: ಪಶ್ಚಿಮ ದೆಹಲಿಯ ರೋಹಿಣಿಯಲ್ಲಿ ಅತೀಂದ್ರಿಯ ಆಚರಣೆಗಳನ್ನು ಮಾಡುವ ನೆಪದಲ್ಲಿ 12 ವರ್ಷದ ಬಾಲಕಿಯ ಮೇಲೆ ಸ್ಮಶಾನದಲ್ಲಿ ಅತ್ಯಾಚಾರ ಮಾಡಿದ ಆರೋಪದ ಮೇಲೆ 52 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಮಂತ್ರವಾದಿಯಂತೆ ನಟಿಸಿ ಬಾಲಕಿಯನ್ನು ಕಾಂಝಾವಾಲಾದ ಸ್ಮಶಾನಕ್ಕೆ ಕರೆದೊಯ್ದ ಆತ ಆಕೆಯ ಅನಾರೋಗ್ಯಪೀಡಿತ ತಂದೆಯನ್ನು ‘ಮಾಟ-ಮಂತ್ರ’ ಪದ್ಧತಿಗಳ ಮೂಲಕ ಗುಣಪಡಿಸಬಹುದೆಂದು ನಂಬಿಸಿದ್ದಾನೆ. ನಂತರ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.

ಆರೋಪಿಯು ಆರಂಭದಲ್ಲಿ ಬಾಲಕಿಯ ಮನೆಗೆ ಭೇಟಿ ನೀಡಿ, ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವ ತರಕಾರಿ ಮಾರಾಟಗಾರನಾಗಿದ್ದ ಆಕೆಯ ತಂದೆಗೆ ತನ್ನ ಮಗಳನ್ನು ತನ್ನೊಂದಿಗೆ ಧಾರ್ಮಿಕ ಕ್ರಿಯೆಗೆ ಕಳುಹಿಸುವಂತೆ ಮನವೊಲಿಸಿದ್ದ. ಅದರಂತೆ ಆಕೆಯ ತಂದೆ ತನ್ನ 12 ವರ್ಷದ ಮಗಳನ್ನು ಮಂತ್ರವಾದಿಯ ಬಳಿಗೆ ಕಳುಹಿಸಿದ್ದ. ಸೋಮವಾರ ಈ ಘಟನೆ ನಡೆದಿದೆ. ಆ ಹುಡುಗಿ ಆ ದಿನ ರಾತ್ರಿ ಮನೆಗೆ ಮರಳಿದವಳು ಬಹಳ ಮೌನವಾಗಿದ್ದಳು. ಮರುದಿನ ಅನಾರೋಗ್ಯಕ್ಕೆ ಒಳಗಾದಳು.

ಇದರಿಂದ ಚಿಂತೆಗೀಡಾದ ಆಕೆಯ ಮನೆಯವರು ವಿಚಾರಣೆ ಮಾಡಿದರೂ ಆಕೆ ಏನೂ ಹೇಳಿರಲಿಲ್ಲ. ಆರೋಪಿ ಆ ಬಾಲಕಿಗೆ ಬೆದರಿಕೆ ಹಾಕಿದ್ದು, ಅತ್ಯಾಚಾರ ನಡೆಸಿದ್ದನ್ನು ಯಾರಿಗೂ ಹೇಳಬೇಡ. ಒಂದುವೇಳೆ ಹೇಳಿದರೆ ನಿನ್ನ ತಂದೆ ಸಾಯುವುದಾಗಿ ಎಚ್ಚರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಯಲ್ಲಿ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ.

ಬಾಲಕಿಯ ಕುಟುಂಬವು ಮಂಗಳವಾರ ಪೊಲೀಸರಿಗೆ ಈ ಕೃತ್ಯದ ಬಗ್ಗೆ ದೂರು ನೀಡಿದ್ದು, ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 65(2) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್ 6 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಘಟನೆ ವರದಿಯಾದ ಬೆನ್ನಲ್ಲೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.