ಬೆಳಗಾವಿ : ಸದಾಶಿವ ನಗರದ ಲಕ್ಷ್ಮೀ ‌ಕಾಂಪ್ಲೆಕ್ಸ್ ಬಳಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆಯುತ್ತಿದ್ದ ರೂಪಕ ಮೆರವಣಿಗೆಯ ವೇಳೆ ದುಷ್ಕರ್ಮಿಗಳ ತಂಡವೊಂದು ಸಿಕ್ಕ ಸಿಕ್ಕವರ ಮೇಲೆ ಚಾಕುವಿನಿಂದ  ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಗಾಯಾಳುಗಳನ್ನು ಗುರುನಾಥ ವಕ್ಕುಂದ, ಸಚಿನ್ ಕಾಂಬಳೆ, ಲೋಕೇಶ್ ಬೆಟಗೇರಿ, ಮಹೇಶ್, ವಿನಾಯಕ ಹಾಗೂ ನಜೀರ್ ಪಠಾಣ್‌ ಎಂದು ಗುರುತಿಸಲಾಗಿದೆ. ಗಾಯಾಳುಗಳ ಪೈಕಿ ಮೂವರನ್ನು ಬಿಮ್ಸ್ ಆಸ್ಪತ್ರೆಗೆ ಇನ್ನಿಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಗಾವಿಯ ಸದಾಶಿವ ನಗರದ ಚೆನ್ನಮ್ಮ ವೃತ್ತದ ಬಳಿ ಕನ್ನಡ ರಾಜ್ಯೋತ್ಸವ ಮೆರವಣಿಗೆ ಹೋಗುತ್ತಿರುವ ವೇಳೆ ಚಾಕು, ಜಂಬೆ ಸಮೇತ ಆಗಮಿಸಿದ ದುಷ್ಕರ್ಮಿಗಳು ಎಂಟು ಜನರ ಮೇಲೆ ಹಲ್ಲೆ ನಡೆಸಿದ್ದಾರೆ, ಈ ದಾಳಿಯಲ್ಲಿ ಐದು ಜನ ಸ್ವಲ್ಪ ಗಂಭೀರ ಗಾಯಗೊಂಡಿದ್ದು, ಉಳಿದವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಘಟನೆಗೆ ಸಂಬಂಧಪಟ್ಟಂತೆ ಬಿಮ್ಸ್ ಆಸ್ಪತ್ರೆಗೆ ಕಮಿಷನರ್ ಭೂಷಣ್ ಬೊರಸೆ ಭೇಟಿ ನೀಡಿ ಗಾಯಾಳುಗಳಿಂದ ಮಾಹಿತಿ ಕಲೆ ಹಾಕಿ ಬಳಿಕ ಮಾತನಾಡಿದ ಅವರು, ಕನ್ನಡ ರಾಜ್ಯೋತ್ಸವದ ಮೆರವಣಿಗೆಯ ವೇಳೆ ಘರ್ಷಣೆಯೊಂದು ನಡೆದಿದೆ. ಇದರಲ್ಲಿ ನಾಲ್ವರಿಗೆ ಚಾಕು ಇರಿಯಲಾಗಿದೆ ಎಂದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಳಗಾವಿಯ ‌ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.