ದೊಡ್ಡಬಳ್ಳಾಪುರ: ಗಂಡನ ಮನೆಯವರು ವರದಕ್ಷಿಣೆಗಾಗಿ ಕಿರಕುಳ ನೀಡಿದ್ದಾರೆ ಎಂದು ಆರೋಪಿಸಿ ಗೃಹಿಣಿಯೊಬ್ಬರು ವಿಡಿಯೋ ಮಾಡಿ ಆತ್ಮಹತ್ಯೆ  ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಬಳಿಯಿರುವ ವಿಶ್ವೇಶ್ವರಯ್ಯ ಪಿಕ್ ಅಪ್ ಡ್ಯಾಂನಲ್ಲಿ ನಡೆದಿದೆ.

ಮೃತಳನ್ನು ದೊಡ್ಡಬಳ್ಳಾಪುರ ತಾಲೂಕಿನ ಸೋತೇನಹಳ್ಳಿ ಗ್ರಾಮದ ಉಪನ್ಯಾಸಕಿ ಪುಷ್ಪ (23) ಎಂದು ಗುರುತಿಸಲಾಗಿದೆ. ಪುಷ್ಪಾಳಿಗೆ ತಪಸೀಹಳ್ಳಿಯ ವೇಣು ಎಂಬುವವರ ಜತೆ ಕಳೆದ ಒಂದೂವರೆ ವರ್ಷದ ಹಿಂದೆ ವಿವಾಹವಾಗಿತ್ತು. ಆದರೆ ವಿವಾಹವಾದ ನಂತರ ಹೆಚ್ಚಿನ ವರದಕ್ಷಿಣೆ ಹಾಗೂ ನಿವೇಶನಕ್ಕಾಗಿ ಗಂಡನ ಮನೆಯವರು ಪೀಡಿಸಿ ಕಿರಕುಳ ಕೊಡುತ್ತಿದ್ದರು ಎನ್ನಲಾಗಿದೆ.

ಇನ್ನು ಗಂಡನಿಗೆ ಎರಡನೇ ಮದುವೆಯಾಗುವ ಆಸೆಯಿದ್ದು ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದರು. ಇಷ್ಟೇ ಅಲ್ಲದೆ ಊಟದಲ್ಲಿ ವಿಷ ಹಾಕಿ ಕೊಲೆ ಮಾಡಲು ಸಹ ಪ್ಲ್ಯಾನ್‌ ಮಾಡಿದ್ದರು ಎಂದು ವಿಡಿಯೋದಲ್ಲಿ ಮಹಿಳೆ ಆರೋಪಿಸಿದ್ದಾರೆ.

ಇದರ ನಡುವೆ ಮೈದುನನ ಜತೆ ಮಲಗುವಂತೆಯೂ ಬಲವಂತ ಮಾಡಿದ್ದಾರೆ ಎಂದು ಆರೋಪ ಮಾಡಿ ಗೃಹಿಣಿ ಪುಷ್ಪ 8 ನಿಮಿಷಗಳ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಪುಷ್ಪ ಸೋಮವಾರ (ಅ.20) ವಿಶ್ವೇಶ್ವರಯ್ಯ ಪಿಕ್ ಅಪ್ ಡ್ಯಾಂನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಗಂಡ, ಮಾವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಡಿಯೋದಲ್ಲಿ ಗಂಡ ವೇಣು, ಅತ್ತೆ ಭಾರತಿ, ಮಾವ ಗೋವಿಂದಪ್ಪ ಹಾಗೂ ಮೈದುನ ನಾರಾಯಣಸ್ವಾಮಿ ಸೇರಿ ಸಂಬಂಧಿಕಾರಾದ ಮುತ್ತೇಗೌಡ ಹಾಗೂ ಪಲ್ಲವಿ ಅವರ ಕಿರುಕುಳವೇ ನನ್ನ ಸಾವಿಗೆ ಕಾರಣ, ಅವರಿಗೆ ಶಿಕ್ಷೆಯಾಗಬೇಕು, ನನ್ನ ಮೃತದೇಹವನ್ನು ಗಂಡನ ಮನೆಯೊಳಗೆ ಮಣ್ಣು ಮಾಡುವಂತೆ ಗೃಹಿಣಿ ವಿಡಿಯೋದಲ್ಲಿ ಆಗ್ರಹಿಸಿದ್ದಾಳೆ.