ನಂಜನಗೂಡು: ನನ್ನ ಗಂಡ ಬರದೇ ಇದ್ದಿದ್ರೆ ನಾನು ಕೊಲೆ ಆಗ್ತಿದ್ದೆ.ಇದು ಮೊದಲನೆ ಸಲ ಅಲ್ಲ .ಹಿಂದೆ ಒಂದ್ಸಾರಿ ಬಂದು ಕುತ್ತಿಗೆಗೆ ಚಾಕು ಹಿಡಿದಿದ್ದ. ನಮಗೆ ರಕ್ಷಣೆ ಬೇಕು ಎಂದು ನಂಜನಗೂಡಿನ ಗೃಹಿಣಿ ಮಾಧ್ಯಮದವರ ಮುಂದೆ ಅವಲತ್ತುಕೊಂಡಿದ್ದಾರೆ.

ಮಕ್ಕಳ ಜೊತೆ ಇದ್ದ ಗೃಹಿಣಿ ಮನೆಗೆ ನುಗ್ಗಲು ಹೊಂಚು ಹಾಕುತ್ತಿದ್ದ ಕಳ್ಳ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ.ಕಳ್ಳನ ಸಂಚಿಗೆ ಬೆದರಿದ ಮಹಿಳೆ ಸೆಲ್ವಿ ಎಂಬುವರು ರಕ್ಷಣೆಗಾಗಿ ಮನವಿ ಮಾಡುತ್ತಿದ್ದಾರೆ. ನಂಜನಗೂಡು ಎಂ.ಎಂ.ಬಡಾವಣೆಯಲ್ಲಿ ನಡೆದ ಘಟನೆ ಜನರನ್ನ ಬೆಚ್ಚಿಬೀಳಿಸಿದೆ.

ರಾತ್ರಿ 9 ಗಂಟೆ ವೇಳೆಯಲ್ಲಿ ಖದೀಮನೊಬ್ಬ ವೀರಮಣಿ ಎಂಬುವರ ಮನೆ ಕಾಂಪೌಂಡ್ ಹಾರಿ ಬಂದು ಅವಿತುಕೊಂಡು ಒಳಗೆ ನುಗ್ಗಲು ಹೊಂಚು ಹಾಕುತ್ತಿದ್ದಾಗ ಗೃಹಿಣಿ ಸೆಲ್ವಿ ರವರು ಕೂಗಾಡಿದ್ದಾರೆ. ಅಕ್ಕಪಕ್ಕದ ನಿವಾಸಿಗಳು ದೌಡಾಯಿಸಿ ಖದೀಮನನ್ನ ಹಿಡಿದು ಪೊಲೀಸರ ವಶಕ್ಕೆ ಕೊಟ್ಟಿದ್ದಾರೆ. ಹುಲ್ಲಹಳ್ಳಿಯ ನಂಜೀಪುರ ಗ್ರಾಮದ ಶಿವಪಾದ ಸಿಕ್ಕಿಬಿದ್ದ ಕಳ್ಳ.

ಈ ಹಿಂದೆ ಇದೇ ಮನೆಯಲ್ಲಿ ಈತ ಕಳ್ಳತನಕ್ಕೆ ಯತ್ನಿಸಿ ತಪ್ಪಿಸಿಕೊಂಡಿದ್ದ.ಇದು ಈ ಮನೆಯಲ್ಲಿ ಎರಡನೇ ಬಾರಿ ಕಳ್ಳತನಕ್ಕೆ ಯತ್ನಿಸಿದ್ದಾನೆಂದು ಸೆಲ್ವಿ ಆರೋಪಿಸಿದ್ದಾರೆ. ಖದೀಮನ ವಿರುದ್ದ ಕ್ರಮ ಕೈಗೊಳ್ಳುವಂತೆ ಎಂ.ಎಂ.ಬಡಾವಣೆ ಜನತೆ ಪೊಲೀಸರಿಗೆ ಮನವಿ ಮಾಡಿದ್ದಾರೆ ಹಾಗೂ ತಮ್ಮ ಬಡಾವಣೆಗೆ ಸೂಕ್ತ ರಕ್ಷಣೆ ಒದಗಿಸುವಂತೆಯೂ ಮನವಿ ಮಾಡಿದ್ದಾರೆ.