ಮಡಿಕೇರಿ: ಪತಿ ಪತ್ನಿ ನಡುವಿನ ಮನಸ್ತಾಪ ಸ್ಪೋಟಗೊಂಡ ಪತಿಯೇ  ಪತ್ನಿಯನ್ನು ಕೋವಿಯಿಂದ ಗುಂಡು ಹಾರಿಸಿ ಕೊಲೆಗೈದು ಪೊಲೀಸರಿಗೆ ಶರಣಾಗಿರುವ ಘಟನೆ ಕೊಡಗಿನ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಡುವ ಬೇಟೋಳಿ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.

ಬೇಟೋಳಿ ಗ್ರಾಮಪಂಚಾಯಿತಿ ಮಾಜಿ ಸದಸ್ಯೆ ಶಿಲ್ಪ ಸೀತಮ್ಮ(40) ಎಂಬಾಕೆಯೇ ಗಂಡನಿಂದಲೇ ಕೊಲೆಯಾದ ದುರ್ದೈವಿ. ಈಕೆಯನ್ನು ಕೊಲೆಗೈದ ಬಳಿಕ ಪತಿ ಬೋಪಣ್ಣ(45) ಕೋವಿಯೊಂದಿಗೆ ಪೊಲೀಸ್ ಠಾಣೆಗೆಶರಣಾಗಿದ್ದಾನೆ. ಶಿಲ್ಪ ಸೀತಮ್ಮ 2012 ರಿಂದ 2017 ರವರೆಗೆ ಬೇಟೋಳಿ ಗ್ರಾಮ ಪಂಚಾಯತಿ ಸದಸ್ಯರಾಗಿ ಸೇವೆಸಲಿಸಿದ್ದರು. ಕಾಫಿ ಬೆಳೆಗಾರರಾಗಿದ್ದು ಕುಟುಂಬ ಚೆನ್ನಾಗಿಯೇ ಇತ್ತು ಎಂದು ಹೇಳಲಾಗಿದೆ.

ಶುಕ್ರವಾರ ರಾತ್ರಿ ಶಿಲ್ಪ ಸೀತಮ್ಮಗೆ ಮೊಬೈಲ್ ಕರೆ ಬಂದಿದ್ದು ಆಕೆ ಮಾತನಾಡುತ್ತಿದ್ದಳು ಎಂದು ಹೇಳಲಾಗಿದೆ. ಈ ವಿಚಾರಕ್ಕೆ ಗಂಡ ಹೆಂಡಿರ ನಡುವೆ ಮನಸ್ತಾಪವಾಗಿ ಇಬ್ಬರ ನಡುವೆ ಜಗಳ ನಡೆದಿತ್ತು ಎಂದು ಹೇಳಲಾಗುತ್ತಿದೆ. ಈ ಜಗಳ ಬೆಳಿಗ್ಗೆ ಆಗುವ ವೇಳೆಗೆ ಬಗೆ ಹರಿಯದೆ ಮುಂದುವರೆದಿತ್ತು. ಅಲ್ಲದೆ ಅದು ತಾರಕಕ್ಕೇರಿ ಕೋಪಗೊಂಡ ಬೋಪಣ್ಣ ಬೆಳಿಗ್ಗೆ 9ಗಂಟೆಯ ವೇಳೆಯಲ್ಲಿ ತನ್ನ ಮನೆಯಲ್ಲಿದ್ದ ಕೋವಿಯಿಂದ ಹೆಂಡತಿ ಶಿಲ್ಪ ಸೀತಮ್ಮ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡೇಟಿಗೆ ಶಿಲ್ಪಸೀತಮ್ಮ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಕೊಲೆ ಮಾಡಿದ ಬಳಿಕ ಬೋಪಣ್ಣ ನೇರವಾಗಿ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ಪತ್ನಿಯನ್ನು ಕೊಲೆ ಮಾಡಿರುವುದಾಗಿ ತಿಳಿಸಿ ಶರಣಾಗಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳಕ್ಕೆ ತೆರಳಿ ಶವದ ಮಹಜರು ನಡೆಸಿದ್ದಾರೆ. ಪತ್ನಿಯನ್ನು ಗುಂಡು ಹಾರಿಸಿ ಕೊಲ್ಲುವಂತಹ ಘಟನೆ ಏನು ನಡೆದಿದೆ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ.