ಧಾರ್: ವ್ಯಕ್ತಿಯೊಬ್ಬ ಸಾಲ ತೀರಿಸುವ ಸಲುವಾಗಿ ತನ್ನ ಹೆಂಡತಿಯನ್ನೇ ₹50 ಸಾವಿರಕ್ಕೆ ಮಾರಾಟ ಮಾಡಿರುವ ಘಟನೆ ಮಧ್ಯ‍ಪ್ರದೇಶದ ಧಾರ್‌ ಜಿಲ್ಲೆಯಲ್ಲಿ ನಡೆದಿದೆ.

ಸ್ನೇಹಿತನೊಂದಿಗೆ ದೈಹಿಕ ಸಂಬಂಧ ಹೊಂದಲು ಒತ್ತಾಯಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಇಂದೋರ್‌ನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಅಪರಾಧದ ಗಂಭೀರತೆಯನ್ನು ಪರಿಗಣಿಸಿ, ಪೊಲೀಸರು ಪ್ರಕರಣವನ್ನು ‘ಶೂನ್ಯ’ ಎಫ್‌ಐಆರ್ ಎಂದು ದಾಖಲಿಸಿ, ಧಾರ್ ಪೊಲೀಸರಿಗೆ ವರ್ಗಾಯಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಶೂನ್ಯ ಎಫ್ಐಆರ್ ಎಂದರೆ ಅಪರಾಧ ನಡೆದ ಸ್ಥಳದ ಬಗ್ಗೆ ಪರಿಗಣಿಸದೆ, ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿದೆ. ‘ನನ್ನ ಪತಿ ಜೂಜಾಟ ಆಡುತ್ತಾನೆ. ಈ ಅಭ್ಯಾಸದಿಂದಲೇ ಅವನ ಸಾಲ ಹೆಚ್ಚುತ್ತಲೇ ಇತ್ತು’ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

‘ಸಾಲದ ಸುಳಿಯಲ್ಲಿ ಸಿಲುಕಿರುವ ಪತಿ, ಸಾಲ ನೀಡಿದ್ದ ತನ್ನ ಸ್ನೇಹಿತನೊಂದಿಗೆ ದೈಹಿಕ ಸಂಬಂಧ ಹೊಂದಲು ಒತ್ತಾಯಿಸಿದ್ದಾನೆ ಎಂದೂ ಸಂತ್ರಸ್ತೆ ಆರೋಪಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.