ಚಾಮರಾಜನಗರ : ಪ್ರಿಯತಮನೊಂದಿಗೆ ಪರಾರಿಯಾಗಿದ್ದ ಗೃಹಿಣಿಯನ್ನು ಕೈ ಹಿಡಿದ ಪತಿಯೇ ಧಾರಣವಾಗಿ ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯ ಸಮೀಪವೇ ಹಾಡಹಗಲೇ ನಡೆದಿದೆ.
ಚಾಮರಾಜನಗರ ಪಟ್ಟಣದ ಸೋಮವಾರ ಪೇಟೆ ನಿವಾಸಿ ಗಿರೀಶ್ ಎಂಬಾತನೇ ತನ್ನ ಮಡದಿ ವಿದ್ಯಾ (30) ಳನ್ನು ಕುಡಗೋಲಿನಿಂದ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ. ಕಳೆದ ಮೂರು ತಿಂಗಳ ಹಿಂದೆ ವಿದ್ಯಾ ಅನ್ಯ ಕೋಮಿನ ಯುವಕನೊಂದಿಗೆ ಅನೈತಿಕ ಸಂಬಂಧ ಬೆಳಸಿಕೊಂಡು ಗಂಡನ ಮನೆಯಿಂದ ನಾಪತ್ತೆಯಾಗಿದ್ದಳು. ಪತ್ನಿಯ ಹುಡುಕಿಕೊಡುವಂತೆ ಗಿರೀಶ್ ಪಟ್ಟಣ ಪೊಲೀಸ್ ಠಾಣೆಗೆ ಮನವಿ ಮಾಡಿದ್ದರು.
ಪತಿಯಿಂದ ಪತ್ನಿಯನ್ನು ಹುಡುಕಿ ಕೊಡುವ ಕಾರ್ಯದಲ್ಲಿ ತೊಡಗಿದ್ದ ಪೊಲೀಸರು ವಿದ್ಯಾಳನ್ನು ಆಕೆಯ ಪ್ರಿಯತಮನಿಂದ ಕರೆಸಿಕೊಂಡು ಗಂಡನ ಮನೆಗೆ ತೆರಳುವಂತೆ ಮನವಿ ಮಾಡಿದ್ದರು ಸಹ ಆಕೆ ಗಂಡನ ಸಹವಾಸ ಬೇಡ ತನಗೆ ತನ್ನ ಪ್ರಿಯತಮನೇ ಬೇಕೆಂದು ಹಠ ಹಿಡಿದಾಗ ಪೊಲೀಸರು, ವಿದ್ಯಾಳನ್ನು ಸಮೀಪದ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಕಳುಹಿಸಿದರು.
ಮಂಗಳವಾರ ವಿದ್ಯಾಳ ಪತಿ ಗಿರೀಶ್ ಪಟ್ಟಣ ಪೊಲೀಸ್ ಠಾಣೆಗೆ ಆಗಮಿಸಿ, ಪತ್ನಿಯನ್ನು ಮನೆಗೆ ಬರುವಂತೆ ಮನವಿ ಮಾಡಿದರೂ ಪತಿಯ ಮನವಿಗೆ ಸ್ಪಂದಿಸಲಿಲ್ಲ. ನಂತರ ಠಾಣೆಯ ಹೊರಗಡೆ ತೆರಳಿದಳು ವಿದ್ಯಾ. ಪತ್ನಿಯ ವರ್ತನೆಯಿಂದ ಮನನೊಂದಿದ್ದ ಗಿರೀಶ್ ಮತ್ತೊಮ್ಮೆ ಪತ್ನಿಯ ಬಳಿ ಮನೆಗೆ ಬರುವಂತೆ ಯತ್ನಿಸಿದರೂ ಸಹ ಪ್ರಯೋಜನೆ ಆಗಲಿಲ್ಲ ಇದರಿಂದ ಬೇಸತ್ತ ಗಿರೀಶ್ ಮೊದಲೇ ತಂದಿದ್ದ ಕುಡಗೋಲಿನಿಂದ ಹಲ್ಲೆ ನಡೆಸಿದನು.
ಪತಿಯ ಹಲ್ಲೆಯಿಂದ ತೀವ್ರ ರಕ್ತಸ್ರಾವವಾಗಿ ಕುಸಿದು ಬಿದ್ದ ವಿದ್ಯಾ ಮೃತಪಟ್ಟಳು. ಈ ಘಟನೆ ಹಾಡು ಹಗಲೇ ನಡೆದಿದ್ದು, ಸಿನಿಮೀಯ ರೀತಿಯಲ್ಲೇ ನಡೆದೇ ಹೋಯಿತು. ಹತ್ಯೆ ಮಾಡಿದ ಬಳಿಕ ಗಿರೀಶ್ ಸ್ಥಳದಿಂದ ಪರಾರಿಯಾಗಿದ್ದು, ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

