ನಂಜನಗೂಡು: ದರೋಡೆ ಸ್ಕೆಚ್ ರೂಪಿಸಿ ಪತಿ ಕೊಲೆಗೆ ಪತ್ನಿ ಯತ್ನಿಸಿದ ಪ್ರಕರಣ ಹಿನ್ನಲೆ ಹಲ್ಲೆಗೊಳಗಾದ ಪತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಡ್ರಾಗರ್ ಹಾಗೂ ಲಾಂಗ್ ನಿಂದ ಹಲ್ಲೆಗೆ ಒಳಗಾದ ಪತಿ 20 ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಸಾವಿಗೆ ಶರಣಾಗಿದ್ದಾರೆ. ರಾಜೇಂದ್ರ ಪತ್ನಿ ಸ್ಕೆಚ್ ಗೆ ಬಲಿಯಾದ ದುರ್ದೈವಿ.
ಪತಿ ಕೊಲೆಗೆ ದರೋಡೆ ಸ್ಕೆಚ್ ರೂಪಿಸಿದ ಪತ್ನಿ ಸಂಗೀತಾ ಜೈಲು ವಾಸಿಯಾಗಿದ್ದಾಳೆ ಪತಿ ರಾಜೇಂದ್ರ ಮಸಣ ಸೇರಿದ್ದಾನೆ. ಅಕ್ಟೋಬರ್ 26 ರಂದು ನಂಜನಗೂಡಿನ ಹುಂಡುವಿನಹಳ್ಳಿ ಬಡಾವಣೆಯಲ್ಲಿ ರಾಜೇಂದ್ರ ತನ್ನ ಪತ್ನಿ ಸಂಗೀತಾ ಜೊತೆ ಸ್ಕೂಟರ್ ನಲ್ಲಿ ತೆರಳುತ್ತಿದ್ದ ವೇಳೆ ಕಾರ್ ನಲ್ಲಿ ಬಂದ ಮೂವರು ಅಟ್ಯಾಕ್ ಮಾಡಿ ರಾಜೇಂದ್ರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ದರೋಡೆ ಪ್ರಕರಣ ದಾಖಲಿಸಿಕೊಂಡ ನಂಜನಗೂಡು ಪಟ್ಟಣ ಪೊಲೀಸರು, ವಿಶೇಷ ತಂಡ ರಚಿಸಿ ದುಷ್ಕರ್ಮಿಗಳ ಸೆರೆಗೆ ಜಾಲ ಬೀಸಿದ್ದರು. ಸಿಸಿ ಟಿವಿ ಫುಟೇಜ್ ಪರಿಶೀಲಿಸಿದ ಪೊಲೀಸರಿಗೆ ಪತ್ನಿ ಸ್ಕೆಚ್ ಬಯಲಾಗಿತ್ತು.
ಪತಿ ಕೊಲೆಗೆ ದರೋಡೆ ಬಣ್ಣ ಕಟ್ಟಿ ಸ್ವಂತ ತಮ್ಮನಿಗೇ ಸುಫಾರಿ ನೀಡಿ ಹತ್ಯೆಗೆ ಯತ್ನಿಸಿದ ಸಂಚು ಬಯಲಾಗಿತ್ತು. ತೀವ್ರ ಹಲ್ಲೆಗೆ ಒಳಗಾಗಿದ್ದ ರಾಜೇಂದ್ರ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ರಾಜೇಂದ್ರ ಮೃತಪಟ್ಟಿದ್ದಾನೆ. ಈ ಸಂಬಂಧ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

