ಬೆಂಗಳೂರು: ಪತಿ ತನ್ನ ಪತ್ನಿಯನ್ನು ತೋಟಕ್ಕೆ ಕರೆದುಕೊಂಡು ಹೋಗಿ ಆಕೆಯನ್ನು ಕೊಲೆ ಮಾಡಿದ್ದನು ಬಳಿಕ ಯಾರೋ ಕೊಲೆ ಮಾಡಿದ್ದಾರೆ ಎಂದು ನಾಟಕವಾಡಿದ್ದಾನೆ. ಸದ್ಯ ಇದೀಗ ಬಾಗಲೂರು ಪೊಲೀಸರು ಆರೋಪಿಯ ಕೃತ್ಯ ಬಯಲು ಮಾಡಿದ್ದು ಆರೋಪಿ ಅರೆಸ್ಟ್ ಆಗಿದ್ದಾನೆ.
ಪತ್ನಿಯನ್ನ ತಾನೇ ಕೊಲೆ ಮಾಡಿ ನಾಟಕ ಆಡುತ್ತಿದ್ದ ಪತಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಮೆಹಬೂಬ್ ಪಾಷಾ(50) ಬಂಧಿತ ಕೊಲೆ ಆರೋಪಿ. ಬಾಗಲೂರಿನ ರಜಾಕ್ ಸಾಬ್ ಪಾಳ್ಯದಲ್ಲಿ ವಾಸವಿದ್ದ ಮೆಹಬೂಬ್, ಕೂಲಿ ಕೆಲಸ ಮಾಡಿಕೊಂಡು ಪತ್ನಿ ಮುಮ್ತಾಜ್ ಜೊತೆ ವಾಸವಿದ್ದ.
ಆ.25ರಂದು ಪೊಲೀಸ್ ಠಾಣೆಗೆ ಬಂದು ನನ್ನ ಪತ್ನಿ ಕೊಲೆಯಾಗಿದ್ದಾಳೆ. ಅಪರಿಚಿತ ವ್ಯಕ್ತಿಗಳು ಸೀಬೆ ತೋಟದಲ್ಲಿ ಕೊಲೆ ಮಾಡಿದ್ದಾರೆ ಎಂದು ದೂರು ಕೊಟ್ಟಿದ್ದ. ಆ.24ರಂದು ನಾನು ಫಂಕ್ಷನ್ಗೆ ಅಂತ ಹೊರಗಡೆ ಹೋಗಿದ್ದೆ. ಆ.24 ಸಂಜೆಯಿಂದ ಪತ್ನಿಗೆ ಕರೆ ಮಾಡಿದರೆ ರಿಸೀವ್ ಮಾಡಿಲ್ಲ. ಬೆಳಗ್ಗೆ ತೋಟದ ಬಳಿ ಹೋದಾಗ ಪತ್ನಿ ಹೆಣವಾಗಿ ಬಿದ್ದಿದ್ದಳು. ಯಾರೋ ನನ್ನ ಪತ್ನಿಯನ್ನ ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದನು.
ಪೊಲೀಸರು ಕೂಡ ದೂರು ಸ್ವೀಕರಿಸಿ ತನಿಖೆ ಶುರು ಮಾಡಿದ್ದಾರೆ. ಆದರೆ ಪೊಲೀಸರಿಗೆ ಈತನ ಮಾತಿನ ಮೇಲೆ ಅನುಮಾನ ಮೂಡಿತ್ತು. ಆರೋಪಿ ಮೆಹಬೂಬ್ ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಲಿಲ್ಲ. ಹೀಗಾಗಿ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಅಸಲಿ ವಿಚಾರ ಬಯಲಿಗೆ ಬಂದಿದೆ. ಹೆಂಡತಿ ಮೇಲೆ ಅನುಮಾನ ಪಟ್ಟು ತಾನೇ ಕೊಲೆಗೈದಿರೋದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

