ನಾಗ್ಪುರ್:‌ ಹಿಟ್‌ & ರನ್‌ ಘಟನೆಯಲ್ಲಿ ಕೊನೆಯುಸಿರೆಳೆದಿದ್ದ 82 ವರ್ಷದ ಹಿರಿಯ ವ್ಯಕ್ತಿಯೊಬ್ಬರ ಸಾವಿನ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಮಹತ್ವದ ಸುಳಿವು ಸಿಗುವ ಮೂಲಕ ಇದೊಂದು ವ್ಯವಸ್ಥಿತ ಕೊಲೆ ಎಂಬುದು ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.

ಕುಟುಂಬದ 300 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಲಪಟಾಯಿಸುವ ನಿಟ್ಟಿನಲ್ಲಿ ಸೊಸೆಯೇ ಮಾವನನ್ನು ಕೊಲೆ ಮಾಡಿಸಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ್‌ ನಲ್ಲಿ ನಡೆದಿದೆ.

ನಗರ ಯೋಜನಾ ಇಲಾಖೆಯ ಸಹಾಯಕ ನಿರ್ದೇಶಕಿಯಾಗಿರುವ ಅರ್ಚನಾ ಮನೀಶ್‌ ಪುಟ್ಟೇವಾರ್‌ ಎಂಬಾಕೆಯನ್ನು ಕಳೆದ ವಾರ ಬಂಧಿಸಲಾಗಿತ್ತು. ಪುರುಷೋತ್ತಮ್‌ ಪುಟ್ಟೇವಾರ್‌ ಅವರಿಗೆ ಕಾರನ್ನು ಡಿಕ್ಕಿ ಹೊಡೆಸಿ ಕೊಲ್ಲಿಸಲಾಗಿತ್ತು.

ಪೊಲೀಸರು ಪಿಟಿಐಗೆ ತಿಳಿಸಿರುವ ಮಾಹಿತಿ ಪ್ರಕಾರ, ಅರ್ಚನಾ ಪುಟ್ಟೇವಾರ್‌, ಮಾವನನ್ನು ಕೊಲೆಗೈಯಲು ಬಾಡಿಗೆ ಹಂತಕರನ್ನು ಕರೆಯಿಸಿ, ಒಂದು ಕೋಟಿ ರೂಪಾಯಿ ಹಣ ಪಾವತಿಸಿದ್ದಳು. ಈಗಾಗಲೇ ಬಳಸಿರುವ ಕಾರನ್ನು ಖರೀದಿಸಿ, ಮಾವನ ಹತ್ಯೆಗೆ ಸ್ಕೆಚ್‌ ಹಾಕಿದ್ದರು ಎಂದು ವರದಿ ತಿಳಿಸಿದೆ.

ಕೊಲೆಯನ್ನು ಅಪಘಾತ ಎಂದು ಬಿಂಬಿಸಲು ಎಲ್ಲಾ ರೀತಿಯ ಸನ್ನಿವೇಶ ಸೃಷ್ಟಿಸಿದ್ದರು. ತನ್ನ ಪತಿಯ ಕಾರು ಚಾಲಕ ಬಾಗ್ಡೇ ಹಾಗೂ ಇತರ ಇಬ್ಬರು ಆರೋಪಿಗಳಾದ ನೀರಜ್‌ ನಿಮ್ಜೇ, ಸಚಿನ್‌ ಧಾರ್ಮಿಕ್‌ ಜತೆಗೂಡಿ ಸಂಚು ರೂಪಿಸಲಾಗಿತ್ತು ಎಂದು ಪೊಲೀಸರ ವಿಚಾರಣೆಯಲ್ಲಿ ಬಹಿರಂಗವಾಗಿದೆ.