ದೆಹಲಿ: ರಜೆಗಾಗಿ ಐದು ವರ್ಷದ ವಿದ್ಯಾರ್ಥಿಯನ್ನು ಮೂವರು ಬಾಲಕರು ಹೊಡೆದು ಕೊಲೆ ಮಾಡಿರುವ ಘಟನೆ ದೆಹಲಿಯ ಮದರಸಾದಲ್ಲಿ ನಡೆದಿದೆ. ರೋಹನ್ ತನ್ನ ತಾಯಿ ನಜಿನ್ ಖಾತೂನ್ ಮತ್ತು ಏಳು ವರ್ಷದ ಸಹೋದರಿಯೊಂದಿಗೆ ಸರಸ್ವತಿ ವಿಹಾರ್‌ನ ಶಂಕರ್ ಬಸ್ತಿಯ ಕೊಳೆಗೇರಿಯಲ್ಲಿ ವಾಸವಾಗಿದ್ದ.

ತಂದೆ ತಾಲಿಬ್ ಕಳೆದ ಐದು ವರ್ಷಗಳಿಂದ ವಜೀರಾಬಾದ್‌ನಲ್ಲಿ ಕುಟುಂಬದಿಂದ ದೂರ ವಾಸಿಸುತ್ತಿದ್ದಾರೆ. ತಾಯಿ ದುಡಿದು ಸಂಸಾರ ನಡೆಸುತ್ತಿದ್ದಾರೆ.

ನಜಿನ್ ಅವರ ಇನ್ನೊಬ್ಬ ಮಗ ತನ್ನ ಅಜ್ಜಿಯೊಂದಿಗೆ ಹಳ್ಳಿಯಲ್ಲಿ ವಾಸಿಸುತ್ತಾನೆ. ಸುಮಾರು ಐದು ತಿಂಗಳ ಹಿಂದೆ ನಜಿನ್ ತನ್ನ ಮಗನನ್ನು ತಾಲಿಮ್-ಉಲ್-ಕುರಾನ್ ಮದರಸಾಗೆ ಸೇರಿಸಿದ್ದರು. ಮದರಸಾದಲ್ಲಿ ಬಾಲಕ ಅಸ್ವಸ್ಥನಾಗಿರುವ ಕುರಿತು ತಾಯಿಗೆ ಮಾಹಿತಿ ಸಿಕ್ಕಿತ್ತು, ತಕ್ಷಣ ಮದರಸಾಗೆ ಹೋಗಿ ಅಲ್ಲಿಂದ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದರು.

ಅಲ್ಲಿ ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದ್ದರು. ಮಗನ ಮೈಮೇಲೆ ಗಾಯದ ಗುರುತುಗಳಿರುವುದನ್ನು ಕಂಡು ಅನುಮಾನ ಬಂದಿತ್ತು. ನಜಿನ್ ಮಗನ ಶವದೊಂದಿಗೆ ಮದರಸಾ ತಲುಪಿ ಗಲಾಟೆ ಮಾಡಿದರು, ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ.