ಬಳ್ಳಾರಿ: ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಂದೆ ವೈದ್ಯರ ನಿರ್ಲಕ್ಷ್ಯದಿಂದಲೇ ಸಾವನ್ನಪ್ಪಿದ್ದಾರೆ ಎಂದು ಮಗ ವಿಮ್ಸ್‌ನ ಮಹಿಳಾ ವೈದ್ಯೆ ಮೇಲೆ ಹಲ್ಲೆ ನಡೆಸಿದ್ದಾನೆ.
ವೈದ್ಯೆ ಮೇಲಿನ ಹಲ್ಲೆ ಖಂಡಿಸಿ ಬಳ್ಳಾರಿಯ ವಿಮ್ಸ್ ತುರ್ತು ಚಿಕಿತ್ಸಾ ಘಟಕದ ಮುಂದೆ ವೈದ್ಯಕೀಯ ವಿದ್ಯಾರ್ಥಿಗಳು ಸೋಮವಾರ ತಡರಾತ್ರಿ ದಿಢೀರ್ ಪ್ರತಿಭಟಿಸಿದರು. ವೈದ್ಯರ ರಕ್ಷಣೆ ಕೋರಿ ವಿದ್ಯಾರ್ಥಿಗಳು ಪ್ರತಿಭಟಿಸಿದರು.
ಗೂಡಾರ್‌ನಗರ ನಾಗೇಶ್ ಎಂಬಾತ ಕರ್ತವ್ಯ ನಿರತ ವೈದ್ಯೆ ಮೇಲೆ ಹಲ್ಲೆ ನಡೆಸಿದ್ದಾನೆ. ನಾಗೇಶ್‌ನ ತಂದೆ ಅನಾರೋಗ್ಯದಿಂದ ವಿಮ್ಸ್‌ಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಕ್ಕೆ ಆಕ್ರೋಶಗೊಂಡ ನಾಗೇಶ್ ಕರ್ತವ್ಯದಲ್ಲಿದ್ದ ವೈದ್ಯೆ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ.
ಸೆಕ್ಯುರಿಟಿ ಸಮಸ್ಯೆಯಿಂದಲೇ ಹೀಗೆ ವೈದ್ಯರ ಮೇಲೆ ಹಲ್ಲೆ ನಡೆಯುತ್ತಿದೆ. ವಿಮ್ಸ್‌ನಲ್ಲಿ ಭದ್ರತಾ ಸಿಬ್ಬಂದಿ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದರು. ವಿಷಯ ತಿಳಿಯುತ್ತಿದ್ದಂತೆ ತಡರಾತ್ರಿ ಘಟನಾ ಸ್ಥಳಕ್ಕೆ ಆಗಮಿಸಿದ ವಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ್ ಹಾಗೂ ಕೌಲ್‌ಬಜಾರ್ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಹಲ್ಲೆ ನಡೆಸಿದವರ ವಿರುದ್ಧ ಕ್ರಮವಹಿಸಲಾಗುವುದು. ಜತೆಗೆ ವಿಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುವವರಿಗೆ ಸೂಕ್ತ ರೀತಿಯ ಭದ್ರತೆಯನ್ನು ವಹಿಸಲಾಗುವುದು ಎಂದು ಭರವಸೆ ನೀಡಿದರು.

