ಮಡಿಕೇರಿ: ಪ್ರೀತಿಸಿದ ಯುವಕನ‌ ಮೇಲೆ ಯುವತಿಯ ಕುಟುಂಬಸ್ಥರು ಬಿಸಿ ನೀರು ಎರಚಿ ವಿಕೃತಿ ಮೆರೆದಿರುವ ಅಮಾನವೀಯ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಸುಹೇಲ್ (27) ಎಂಬ ಯುವಕನ ಮೇಲೆ ಬಿಸಿ ನೀರು ಎರಚಲಾಗಿದ್ದು ಯುವಕನ ಮುಖ, ಗುತ್ತಿಗೆ ಭಾಗಗಳಿಗೆ ಗಂಭೀರ ಗಾಯಗಳಾಗಿವೆ.

ಮಡಿಕೇರಿ ತಾ| ಮದೆನಾಡು ಗ್ರಾಮದ ಗಣಪತಿ ಬೀದಿ‌ ನಿವಾಸಿ ಸುಹೇಲ್ ಮದೆನಾಡಿನ ಜೀನತ್ ಎಂಬಾಕೆಯನ್ನ ಪ್ರೀತಿಸುತ್ತಿದ್ದ. ಜೀನತ್ ತನ್ನ ಪ್ರಿಯಕರನಿಗೆ ಕರೆ ಮಾಡಿ ನನಗೆ ಮನೆಯಲ್ಲಿ ತುಂಬಾ ಹಿಂಸೆಯಾಗುತ್ತಿದೆ. ಮನೆಯಲ್ಲಿರಲು ಆಗುತ್ತಿಲ್ಲ ಎಂದು ಹೇಳಿದ್ದಳು. ಹೀಗಾಗಿ ತನ್ನ ಪ್ರೇಯಸಿಯನ್ನು ಕರೆತರಲು ಎಂದು ಆಕೆಯ ಮನೆಗೆ ಹೋಗಿದ್ದಾಗ ಜೀನತ್ ತಂದೆ ಸಾಧಿಕ್ ಯುವಕನ ಜೊತೆ ಜಗಳ ಮಾಡಿದ್ದಾರೆ.

ಈ ವೇಳೆ ಸುಹೇಲ್ ಮೇಲೆ ಬಿಸಿ ನೀರು ಎರಚಿ ವಿಕೃತಿ ಮೆರೆದಿದ್ದಾರೆ. ಗಂಭೀರವಾಗಿ ಗಾಯಗೊಂಡ‌ ಸುಹೇಲ್​ನನ್ನು ಮಡಿಕೇರಿ ಕೊಯಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.