ರಾಯ್ಪುರ್‌: ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ 6 ಮಾವೋವಾದಿಗಳು ಹತ್ಯೆಗೀಡಾಗಿದ್ದಾರೆ. ಎನ್‌ಕೌಂಟರ್‌ ನಡೆದ ಸ್ಥಳದಲ್ಲಿ AK-47 ಮತ್ತು SLR ರೈಫಲ್‌ಗಳು, ಸ್ಫೋಟಕಗಳು ಪತ್ತೆಯಾಗಿವೆ.

ನಾರಾಯಣಪುರ ಜಿಲ್ಲೆಯ ಅಬುಜ್‌ಮದ್ ಪ್ರದೇಶದ ದಟ್ಟ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿವೆ. ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ನಕ್ಸಲ್‌ ಭದ್ರಕೋಟೆಯಾದ ಅಬುಜ್‌ಮದ್ ಕೋರ್ ವಲಯದಲ್ಲಿ ಮಾವೋವಾದಿಗಳ ವಿರುದ್ಧ ನಡೆದ ಮಹತ್ವದ ಕಾರ್ಯಾಚರಣೆಯಲ್ಲಿ ಈ ಎನ್‌ಕೌಂಟರ್ ಸಹ ಒಂದಾಗಿದೆ.

ಈ ಪ್ರದೇಶದಲ್ಲಿ ಮಾವೋವಾದಿಗಳ ಚಲನವಲನದ ಬಗ್ಗೆ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಎನ್‌ಕೌಂಟರ್‌ ನಡೆದ ಸ್ಥಳದಲ್ಲಿ ಅಪಾರ ಪ್ರಮಾಣದ ಸ್ಫೋಟಕ, ಬಂದೂಕುಗಳು ಹಾಗೂ ದಿನಸಿ ಪದಾರ್ಥಗಳು ಪತ್ತೆಯಾಗಿವೆ.

ಅಧಿಕಾರಿಗಳು ಅವುಗಳನ್ನು ಜಪ್ತಿ ಮಾಡಿದ್ದಾರೆ. ಜೂನ್ 6 ರಂದು, ಛತ್ತೀಸ್‌ಗಢದ ಬಿಜಾಪುರದ ಇಂದ್ರಾವತಿ ರಾಷ್ಟ್ರೀಯ ಉದ್ಯಾನವನ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ತಲೆಗೆ 45 ಲಕ್ಷ ರೂ. ಬಹುಮಾನ ಹೊಂದಿದ್ದ‌ ನಕ್ಸಲ್ ನಾಯಕ ಭಾಸ್ಕರ್ ಹತ್ಯೆಗೀಡಾಗಿದ್ದ.