ಕೊಪ್ಪಳ: ಗಾಂಜಾ ಮತ್ತಿನಲ್ಲಿ ಚಾಲಕನೋರ್ವ ಕಾರು ಓಡಿಸಿ ಬೈಕ್‌ಗಳಿಗೆ ಗುದ್ದಿದ ಘಟನೆ ಕೊಪ್ಪಳ ನಗರದ ಸಿಂಪಿ ಲಿಂಗಣ್ಣ ರಸ್ತೆಯಲ್ಲಿ ಶನಿವಾರ ರಾತ್ರಿ ನಡೆದಿದೆ. ಘಟನೆಯಲ್ಲಿ 10ಕ್ಕೂ ಹೆಚ್ಚು ಬೈಕ್‌ಗಳಿಗೆ ಹಾನಿಯಾಗಿದ್ದು, ಪೊಲೀಸರು ಕಾರು ಚಾಲಕನ್ನು ವಶಕ್ಕೆ ಪಡೆದಿದ್ದಾರೆ.

ಕಾರು ಚಾಲಕನನ್ನು ವಿಶ್ವಾಸ್‌ ಎಂದು ಗುರುತಿಸಲಾಗಿದೆ. ಈತ ಕಾರು ಚಲಾಯಿಸಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಮುಂದೆ‌ ನಿಲ್ಲಿಸಿದ್ದ 10 ಬೈಕ್‌ಗಳಿಗೆ ಗುದ್ದಿದ್ದಾನೆ. ಈ ವೇಳೆ ಈತ ಅಮಲಿನಲ್ಲಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ವಿಶ್ವಾಸ್‌ ಗಾಂಜಾ ಸೇವಿಸಿದ ಮತ್ತಿನಲ್ಲಿ ಕಾರು ಚಲಾಯಿಸಿ ಗುದ್ದಿದ್ದಾನೆ ಎಂದು ಆರೋಪಿಸಿ ಬೈಕ್‌ ಸವಾರರು ಆತನನ್ನು ತರಾಟೆಗೆ ತೆಗೆದುಕೊಂಡರು.

ಬಳಿಕ ಘಟನಾ ಸ್ಥಳಕ್ಕೆ ನೂತನ ಎಸ್‌ಪಿ ಡಾ. ರಾಮ್ ಅರಸಿದ್ದಿ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಿದರು. ಸದ್ಯ ಕಾರು ಚಾಲಕ ವಿಶ್ವಾಸನನ್ನು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ