ಪಾವಗಡ : ಇಬ್ಬರು ಮಕ್ಕಳನ್ನು ಕೊಲೆ ಮಾಡಿದ ತಾಯಿ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ಕೃತ್ಯ ತುಮಕೂರಿನ ಪಾವಗಡದಲ್ಲಿ ನಡೆದಿದೆ.

ವರದಕ್ಷಿಣೆ ಕಿರುಕುಳವೇ ಘಟನೆಗೆ ಪ್ರಮುಖ ಕಾರಣ ಎಂದು ಶಂಕಿಸಲಾಗಿದೆ. 23 ವರ್ಷದ ಸರಿತಾ ಎಂಬಾಕೆ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿಯಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ 4 ವರ್ಷದ ಮಗ ಕೌಶಿಕ್ ಹಾಗೂ 2 ವರ್ಷದ ಮಗು ಯುಕ್ತಿಯನ್ನು ಕೊಲೆ ಮಾಡಿದ್ದು, ಬಳಿಕ ತಾವೂ ಸಾವನ್ನಪ್ಪಿದ್ದಾರೆ.

ಪಾವಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಮೂಲತಃ ಕಡಪನಕೆರೆಯ ಸರಿತಾ ತನ್ನದೇ ಊರಿನ ಸಂತೋಷ್ ಜೊತೆ ವಿವಾಹವಾಗಿದ್ದರು. ಕಳೆದ 6 ವರ್ಷಗಳ ಹಿಂದೆ ಸಂತೋಷ್ ಜೊತೆ ವಿವಾಹವಾಗಿತ್ತು.ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಸಂತೋಷ್ ಈ ಘಟನೆ ನಡೆದ ವೇಳೆ ಮನೆಯಲ್ಲಿರಲಿಲ್ಲ.

ಮದುವೆಯಾದಾಗಿನಿಂದ ಪತಿ ಹಾಗೂ ಆತನ ಕುಟುಂಬದಿಂದ ಸರಿತಾಗೆ ವರದಕ್ಷಿಣೆ ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.