ಶ್ರೀನಗರ: ದೆಹಲಿಯ ಕೆಂಪು ಕೋಟೆಯ ಬಳಿ ಕಾರು ಸ್ಫೋಟಕ್ಕೆ ಕಾರಣನಾದ ಉಗ್ರ ಉಮರ್ ಮೊಹಮ್ಮದ್ ಅಲಿಯಾಸ್ ಉಮರ್ ಉನ್-ನಬಿನ ಕಾಶ್ಮೀರದಲ್ಲಿರುವ ಮನೆಯನ್ನು ಭದ್ರತಾ ಪಡೆಗಳು ನೆಲಸಮಗೊಳಿಸಿದೆ.
ಇಂದು ಮುಂಜಾನೆ ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ವೈದ್ಯನ ಮನೆಯನ್ನು ಧ್ವಂಸಗೊಳಿಸುವ ಕಾರ್ಯವನ್ನು ಭದ್ರತಾ ಪಡೆಗಳು ನಡೆಸಿವೆ. ಸೋಮವಾರ ಸಂಜೆ ನಡೆದ ಸ್ಫೋಟದಲ್ಲಿ 13 ಜನರು ಸಾವನ್ನಪ್ಪಿ 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಘಟನೆಯ ತನಿಖೆಯಲ್ಲಿ, ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದ ವೈದ್ಯ ಉಮರ್ ಕೆಂಪು ಕೋಟೆ ಬಳಿಯ ನೇತಾಜಿ ಸುಭಾಷ್ ಮಾರ್ಗದ ಟ್ರಾಫಿಕ್ ಸಿಗ್ನಲ್ ಬಳಿ ಐ 20 ಕಾರನ್ನು ಚಲಾಯಿಸುತ್ತಿದ್ದಾಗ ಸ್ಫೋಟ ಸಂಭವಿಸಿರುವುದು ಬೆಳಕಿಗೆ ಬಂದಿದೆ.
ಸ್ಫೋಟದ ಸ್ಥಳದಲ್ಲಿ ಸಿಕ್ಕ ಅವಶೇಷಗಳಿಂದ ಉಮರ್‌ನ ತಾಯಿಯಿಂದ ಸಂಗ್ರಹಿಸಲಾದ ಡಿಎನ್‌ಎ ಮಾದರಿಗಳು ಹೋಲಿಕೆಯಾಗಿದ್ದು, ಇದು ಉಮರ್ ನಬಿ ಆತ್ಮಹತ್ಯಾ ಸ್ಫೋಟ ನಡೆಸಿರುವುದು ಸ್ಪಷ್ಟವಾಗಿದೆ.
ಇದೀಗ ಉಮರ್ ನಬಿಗೆ ಸಂಬಂಧಿಸಿದ ಕಾಶ್ಮೀರದಲ್ಲಿರುವ ಆತನ ಮನೆಯನ್ನು ಭದ್ರತಾ ಪಡೆಗಳು ನೆಲಸಮ ಮಾಡಿದೆ. ಈ ಮೂಲಕ ಭಾರತೀಯ ನೆಲದಲ್ಲಿ ಭಯೋತ್ಪಾದನೆ ಚಟುವಟಿಕೆಗಳನ್ನು ನಡೆಸುವವರಿಗೆ ವಾರ್ನಿಂಗ್ ನೀಡಲು ಭದ್ರತಾ ಪಡೆಗಳು ಮುಂದಾಗಿದೆ. ಈ ಮೊದಲು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂಚಿನಲ್ಲಿ ಭಾಗಿಯಾಗಿದ್ದವರ ವಿರುದ್ಧವೂ ಪಡೆಗಳು ಇಂತಹುದೇ ಕ್ರಮಗಳನ್ನು ತೆಗೆದುಕೊಂಡಿತ್ತು.
ದೆಹಲಿ ಸ್ಫೋಟದ ನಂತರ ಆತನ ಸಹಚರರು ಮತ್ತು ವೈದ್ಯರಾದ ಮುಜಮ್ಮಿಲ್ ಮತ್ತು ಶಾಹೀನ್ ಸಯೀದ್ ಅವರಿಂದ ಬರೋಬ್ಬರಿ 2,900 ಕೆಜಿ ಬಾಂಬ್ ತಯಾರಿಸುವ ಸಾಮಗ್ರಿಗಳು ಮತ್ತು ಅಸಾಲ್ಟ್ ರೈಫಲ್‌ಗಳಂತಹ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿದೆ. ಇಬ್ಬರೂ ವೈದ್ಯರು ಈಗ ಬಂಧನದಲ್ಲಿದ್ದು, ಫರಿದಾಬಾದ್‌ನಲ್ಲಿ ಸ್ಫೋಟಕಗಳನ್ನು ಸಂಗ್ರಹಿಸುವ ಹಿಂದಿನ ಪಿತೂರಿಯ ಬಗ್ಗೆ ತನಿಖೆಗಳನ್ನು ನಡೆಸಲಾಗುತ್ತಿದೆ.
ಜೈಶ್-ಎ-ಮೊಹಮ್ಮದ್ ಮತ್ತು ಅನ್ಸರ್ ಘಜ್ವತ್ ಉಲ್-ಹಿಂದ್‌ಗೆ ಸಂಬಂಧಿಸಿದ ತಂಡದಿಂದ ದೇಶಾದ್ಯಂತ ದೊಡ್ಡ ದಾಳಿ ನಡೆಸಲು ಸಂಚು ರೂಪಿಸಲಾಗಿತ್ತು ಎಂಬುದನ್ನು ತನಿಖಾಧಿಕಾರಿಗಳು ಬಯಲು ಮಾಡಿದ್ದಾರೆ. ಈ ವಿಚಾರವನ್ನು ಬಂಧಿತ ಉಗ್ರರಿಂದ ತನಿಖಾಧಿಕಾರಿಗಳು ಬಯಲಿಗೆಳೆದಿದ್ದಾರೆ.

