ಉಡುಪಿ: ಉಡುಪಿಯ ಅನಂತ ಕಲ್ಯಾಣ ನಗರದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ಬಾಣಸಿಗ ಶ್ರೀಧರ್ ಎಂಬಾತನ ಸಾವು ಕೊಲೆಯಲ್ಲ. ಬದಲಾಗಿ ತಾನೇ ಬಿಯರ್ ಬಾಟಲಿಯಿಂದ ಕುತ್ತಿಗೆಗೆ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶುಕ್ರವಾರ ಬೆಳಿಗ್ಗೆ ರಸ್ತೆಯ ಬದಿಯಲ್ಲಿ ಶ್ರೀಧರ್ (38) ಎಂಬವರ ಮೃತದೇಹ ಬಾಟಲಿಯಿಂದ ಇರಿದು ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಪೊಲೀಸರು ಕುತ್ತಿಗೆಗೆ ಚುಚ್ಚಿ ಹಲ್ಲೆ ಮಾಡಿ ಕೊಲೆ ಮಾಡಿರಬಹುದು ಎಂದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಆದರೆ, ನಂತರ ತನಿಖೆ ಕೈಗೊಂಡ ಪೊಲೀಸರು ಆಸುಪಾಸಿನ ಸಿಸಿ ಟಿವಿಗಳನ್ನು ಪರಿಶೀಲಿಸಿದ್ದಾರೆ. ಆಗ ಮೃತ ವ್ಯಕ್ತಿಯ ಬಳಿ ಯಾರು ಹಾದು ಹೋಗಿಲ್ಲ, ಹಲ್ಲೆ ಮಾಡಿಲ್ಲ. ಹೀಗಾಗಿ ತಾನೇ ಬಿಯರ್ ಬಾಟಲಿಯಿಂದ ಕುತ್ತಿಗೆ ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.
ಮರಣೋತ್ತರ ಪರೀಕ್ಷೆಯ ವರದಿ ಕೈ ಸೇರಿದ ಬಳಿಕ ಘಟನೆಯ ಬಗ್ಗೆ ಸ್ಪಷ್ಟತೆ ಸಿಗಲಿದೆ. ಶವ ಪರೀಕ್ಷೆ ಮತ್ತು ಸಾಕ್ಷಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಶ್ರೀಧರ್ ವಿಪರೀತ ಮದ್ಯ ವ್ಯಸನಿಯಾಗಿದ್ದನು. ಮಣಿಪಾಲದ ಹೋಟೆಲ್ ವೊಂದರಲ್ಲಿ ಬಾಣಸಿಗನಾಗಿ ಕೆಲಸ ಮಾಡಿಕೊಂಡಿದ್ದರು.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕೇರಳದಿಂದ ಕುಟುಂಬಸ್ಥರು ಆಗಮಿಸಿದ್ದು, ಮಣಿಪಾಲ ಪೊಲೀಸರು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಕೈ ಸೇರಿದ ಬಳಿಕ ಪ್ರಕರಣಕ್ಕೆ ಸ್ಪಷ್ಟತೆ ದೊರಕಲಿದೆ.

