ಕಲಬುರಗಿ: ದೆವ್ವ ಹಿಡಿದಿದೆಯೆಂದು ಆರೋಪಿಸಿ ಮಹಿಳೆಯನ್ನು ಬೇವಿನ ಕಟ್ಟಿಗೆಯಲ್ಲಿ ಹೊಡೆದು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ನಿವಾಸಿ ಮುಕ್ತಾಬಾಯಿ (38) ಕೊಲೆಯಾದ ಮಹಿಳೆ. ಮಹಾರಾಷ್ಟ್ರದ ಮುರುಮ್ ಗ್ರಾಮದ ಗಿಡ್ಡೆಪ್ಪನೊಂದಿಗೆ ಮುಕ್ತಾಬಾಯಿ ಮದುವೆಯಾಗಿದ್ದರು. ಆದರೆ ಕಳೆದ ನಾಲ್ಕು ದಿನದ ಹಿಂದೆ ಮುರುಮ್ ಗ್ರಾಮದಲ್ಲಿ ಆಕೆಯ ಬಾಮೈದ ದೆವ್ವ ಹಿಡಿದಿದೆ ಎಂದು ಬೇವಿನ ಕಟ್ಟಿಗೆಯಲ್ಲಿ ಹೊಡೆದಿದ್ದ.
ಗಿಡ್ಡೆಪ್ಪನ ಸಹೋದರ ಸಂಬಂಧಿಕರೇ ಸೇರಿ ಮುಕ್ತಾಬಾಯಿಯನ್ನು ಹೊಡೆದು ಕೊಂದಿದ್ದಾರೆ. ಮುಕ್ತಾಬಾಯಿ ನಾಲ್ಕು ದಿನಗಳ ಹಿಂದೆ ಮನೆಯಲ್ಲಿದ್ದಾಗ ತಲೆ ಸುತ್ತು ಬಂದಿದು ಬಿದ್ದಿದ್ದರು. ಆಗ ಆಕೆಗೆ ದೆವ್ವ ಹಿಡಿದಿದೆ ಎಂದು ಆರೋಪಿಸಿದ ಬಾಮೈದ ಆಕೆಯನ್ನು ಗಾಣಗಾಪುರದ ದತ್ತನ ಸನ್ನಧಿಗೆ ತಂದು ದೆವ್ವ ಬಿಡಿಸಲು ಮುಂದಾಗಿದ್ದ. ದೆವ್ವ ಬಿಡಿಸಲು ಬೇವಿನ ಕಟ್ಟಿಗೆಯಲ್ಲಿ ಮುಕಾಬಾಯಿ ಮೇಲೆ ಹಲ್ಲೆ ಮಾಡಿದ್ದರು. ಆದರೆ ಹಲ್ಲೆ ಮಾಡಿದ ಬಳಿಕ ಮುಕ್ತಾಬಾಯಿ ಸುಸ್ತಾಗಿ ಬಿದ್ದಿದ್ದರು.
ಮುಕ್ತಾಬಾಯಿ ಅಸ್ವಸ್ಥರಾದಾಗ ಆಕೆಯ ಗಂಡನ ಮನೆಯವರು ಆಕೆಯ ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಇದರಿಂದ ಆಘಾತಗೊಂಡು ಅವರು ಮಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮುಕ್ತಾಬಾಯಿ ನಿನ್ನೆ ತಡರಾತ್ರಿ ಸಾವನ್ನಪ್ಪಿದ್ದಾರೆ. ಈ ಘಟನೆ ಮಹಾರಾಷ್ಟ್ರದ ಮುರುಮ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.

