ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣ ಸಂಬಂಧ ಓರ್ವ ಕೊಲೆ ಆರೋಪಿಯನ್ನು ಅ.21 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮುಂಬೈ ಕೋರ್ಟ್ ಆದೇಶಿಸಿದೆ.
ಬಂಧಿತ ಆರೋಪಿಗಳನ್ನು ಹರಿಯಾಣ ಮೂಲದ ಗುರ್ಮೈಲ್ ಸಿಂಗ್ ಹಾಗೂ ಉತ್ತರ ಪ್ರದೇಶ ಮೂಲದ ಧರ್ಮರಾಜ್ ಸಿಂಗ್ ಕಶ್ಯಪ್ ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಮುಂಬೈ ಪೊಲೀಸರು ಕೊಲೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಮುಂಬೈನ ಎಸ್ಪ್ಲೇನೇಡ್ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.
ಇಬ್ಬರು ಆರೋಪಿಗಳ ಪೈಕಿ ಗುರ್ಮೈಲ್ ಸಿಂಗ್‌ನನ್ನು ಅ.21ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ. ಆರೋಪಿ ಧರ್ಮರಾಜ್ ಸಿಂಗ್ ಕಶ್ಯಪ್ ತಾನು ಅಪ್ರಾಪ್ತ ಎಂದು ಹೇಳಿಕೊಂಡಿದ್ದ. ಅದಕ್ಕೆ ಕೋರ್ಟ್, ಆತನಿಗೆ ಮೂಳೆ ಪರೀಕ್ಷೆಯ ಬಳಿಕ ಮತ್ತೆ ಕೋರ್ಟ್‌ಗೆ ಹಾಜರುಪಡಿಸುವಂತೆ ಸೂಚಿಸಿದೆ.
ಆರೋಪಿ ಸಿದ್ದಾರ್ಥ ಅಗರವಾಲ್‌ನ ವಕೀಲರು ಮಾತನಾಡಿ, ಪೊಲೀಸರು ಆರೋಪಿಗಳನ್ನು ಹಾಜರುಪಡಿಸಿದ್ದಾರೆ. ನಾವು ಕೆಲವು ಆಧಾರಗಳನ್ನು ನೀಡಿದ್ದೇವೆ. ಅವುಗಳ ಆಧಾರದ ಮೇಲೆ ಓರ್ವ ಆರೋಪಿಗೆ ನ್ಯಾಯಾಂಗ ಬಂಧನದ ಆದೇಶವಾಗಿದೆ. ಇನ್ನೋರ್ವ ಆರೋಪಿಯನ್ನು ಆಸಿಫೀಕೇಶನ್ ಪರೀಕ್ಷೆಗೆ ಕಳಿಸಿದ್ದಾರೆ.
ಮುಂಬೈ ಪೊಲೀಸರ ಮಾಹಿತಿ ಪ್ರಕಾರ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಆರೋಪಿಯನ್ನು ಗುರುತಿಸಲಾಗಿದ್ದು, ಮೊಹಮ್ಮದ್ ಜೀಶನ್ ಅಖ್ತರ್ ಎಂದು ಪತ್ತೆಹಚ್ಚಲಾಗಿದೆ. ಸದ್ಯ ಈ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ.

