ಮೈಸೂರು: ಕ್ಷುಲ್ಲಕ ಕಾರಣಕ್ಕೆ ವೈದ್ಯರ ಮೇಲೆ ಹಲ್ಲೆ ನಡೆಸಿದ ಘಟನೆ ಮೈಸೂರಿನ ಸಾತಗಳ್ಳಿ ಬಡಾವಣೆಯ ಶಿಶು ಆಸ್ಪತ್ರೆಯಲ್ಲಿ ನಡೆದಿದೆ. ಡಾ ಅನೂಪ್ ಮೇಲೆ ರುಬಿಯಾಜ್ ಷರೀಪ್ ಹಾಗೂ ಆತನ ತಂದೆಯಿಂದ ಹಲ್ಲೆ ನಡೆದಿದೆ. ಕ್ಲಿನಿಕ್ ಹೊರಭಾಗ ಚಪ್ಪಲಿ ಬಿಟ್ಟು ಬನ್ನಿ ಅಂತಾ ಹೇಳಿದಕ್ಕೆ ಹಲ್ಲೆ ನಡೆಸಿದ್ದಾರೆಂದು ಆರೋಪ ಕೇಳಿಬಂದಿದೆ.

ರುಬಿಯಾಜ್ ಷರೀಫ್ ರ ಮೂರು ವರ್ಷದ ಮಗು ಆಸ್ಪತ್ರೆಗೆ ದಾಖಲಾಗಿತ್ತು. ಈ ವೇಳೆ ಆಸ್ಪತ್ರೆಗೆ ಬಂದಿದ್ದ ರುಬಿಯಾಜ್ ಷರೀಫ್ ಚಪ್ಪಲಿ ಹಾಕಿಕೊಂಡು ಒಳಗೆ ಬಂದಿದ್ದರು. ಚಪ್ಪಲಿ ಹೊರಗೆ ಬಿಡುವಂತೆ ವೈದ್ಯರು ಮನವಿ ಮಾಡಿದ್ದರು.

ಚಪ್ಪಲಿ ಹೊರಗೆ ಬಿಡುವುದಿಲ್ಲ ಅಂತಾ ಗಲಾಟೆ ಮಾಡಿ ನೀವು ಮಾತ್ರ ಹಾಕಿಕೊಳ್ಳಬಹುದಾ ಎಂದು ವಿತಂಡ ವಾದ ಮಾಡಿ ಮಾತಿನ ಚಕಮಕಿ ನಡೆಸಿದ್ದಾರೆ. ತಾವುಬಿಟ್ಟಿದ್ದ ಚಪ್ಪಲಿ ತೋರಿಸಲು ಅನೂಪ್ ಹೊರಗೆ ಬಂದ ವೇಳೆ ಹಲ್ಲೆ ನಡೆಸಿದ್ದಾರೆ. ರುಬಿಯಾಜ್ ಷರೀಪ್ ಗೆ ತಂದೆ ಸಹಾ ಸಾಥ್ ನೀಡಿದ್ದಾರೆ. ಸಿಸಿ ಕ್ಯಾಮೆರಾದಲ್ಲಿ ಹಲ್ಲೆ ದೃಶ್ಯ ಸೆರೆಯಾಗಿದೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದರೂ ಆರೋಪಿಗಳನ್ನು ಬಂಧಿಸಿಲ್ಲವೆಂದು ಹೇಳಲಾಗಿದೆ.