ಹೊಸದಿಲ್ಲಿ: ಕಳೆದ 14 ತಿಂಗಳ ಅವಧಿಯಲ್ಲಿ 9 ಮಂದಿ ಮಹಿಳೆಯರ ಹತ್ಯೆ ಮಾಡಿದ್ದ ಸರಣಿ ಹಂತಕನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಉತ್ತರ ಪ್ರದೇಶದ ಬರೇಲಿಯಲ್ಲಿ ಈ ಘಟನೆ ನಡೆದಿದೆ. ಬಂಧಿತ ವ್ಯಕ್ತಿಯನ್ನು 35 ವರ್ಷದ ಕುಲದೀಪ್ ಗಂಗ್ವಾರ್ ಎಂದು ಗುರುತಿಸಲಾಗಿದೆ. ಒಂಬತ್ತು ಮಧ್ಯವಯಸ್ಕ ಮಹಿಳೆಯರ ಜೀವವನ್ನು ಬಲಿತೆಗೆದುಕೊಂಡ ಕ್ರೂರ ಕೊಲೆಗಳ ಹಿಂದಿನ ಈ ಆರೋಪಿಯು ಮಹಿಳಾ ದ್ವೇಷಿಯಾಗಿದ್ದ ಎಂದು ತಿಳಿದುಬಂದಿದೆ.
ಬಂಧಿತ ಆರೋಪಿಯು ಮಹಿಳೆಯರ ಸೀರೆಯಿಂದಲೇ ಅವರ ಕುತ್ತಿಗೆ ಬಿಗಿದು ಹತ್ಯೆ ಮಾಡುತ್ತಿದ್ದ. ಕಬ್ಬಿನ ಗದ್ದೆಗಳಲ್ಲಿ ಒಂಟಿಯಾಗಿ ಕೆಲಸ ಮಾಡುವ ಮಹಿಳೆಯರನ್ನೇ ಗುರಿಯಾಗಿಸಿ ಸರಣಿ ಹತ್ಯೆ ನಡೆದಿತ್ತು. 14 ತಿಂಗಳಲ್ಲಿ 9 ಮಂದಿ ಮಹಿಳೆಯರನ್ನು ಒಂದೇ ರೀತಿ ಕೊಲೆ ಮಾಡಿ ಆರೋಪಿ ಪರಾರಿಯಾಗುತ್ತಿದ್ದ. ಕಳೆದ 14 ತಿಂಗಳಿನಿಂದ ನಿಗೂಢ ಕೊಲೆಗಳನ್ನು ಭೇದಿಸಲಾಗದೇ ಪರದಾಡಿದ್ದ ಪೊಲೀಸರು ಕೊನೆಗೂ ಹಂತಕನನ್ನು ಸೆರೆ ಹಿಡಿದಿದ್ದಾರೆ.

