ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌  ಜೈಲು ಸೇರಿದ್ದು, ಮನೆ ಊಟ ಕೋರಿ ಸಲ್ಲಿಸಿರುವ ಅರ್ಜಿಯನ್ನು ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ ವಜಾ ಮಾಡಿ ಆದೇಶ ಹೊರಡಿಸಿದೆ.

ಇದರಿಂದ ದರ್ಶನ್‌ಗೆ ಜೈಲೂಟವೇ ಫಿಕ್ಸ್‌ ಆಗಿದೆ. ದರ್ಶನ್ ಪರ ವಕೀಲರು ಹಾಗೂ ಸರ್ಕಾರಿ ಪರ ಎಸ್‌ಪಿಪಿ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ವಿಶ್ವನಾಥ ಸಿ. ಗೌಡರ್ ತೀರ್ಪನ್ನು ಇಂದಿಗೆ ಕಾಯ್ದಿರಿಸಿದ್ದರು. ಅದರಂತೆ ತೀರ್ಪು ಪ್ರಕಟಗೊಂಡಿದೆ.

ಕರ್ನಾಟಕ ಪ್ರಿಸನ್ಸ್ ಕರೆಕ್ಷನ್ ಮ್ಯಾನ್ಯುಲ್ 2021ರ ಸೆಕ್ಷನ್ 728ರ ಪ್ರಕಾರ ಕೊಲೆ ಆರೋಪಿಗೆ ಮನೆ ಊಟಕ್ಕೆ ಅವಕಾಶ ಇಲ್ಲ. ಅಲ್ಲದೆ ಜೈಲು ಅಧಿಕಾರಿಗಳು ನೀಡಿರುವ ವರದಿಯಲ್ಲಿ ಮನೆಯೂಟದ ಅವಶ್ಯಕತೆ ಕಾಣಿಸುತ್ತಿಲ್ಲ. ಜತೆಗೆ ಮನೆ ಊಟದ ಅವಶ್ಯಕತೆ ಸಂಬಂಧ ಪೂರಕವಾದ ವೈದ್ಯಕೀಯ ಪ್ರಮಾಣಪತ್ರಗಳು ಇಲ್ಲ ಎಂದು ದರ್ಶನ್‌ ಅರ್ಜಿ ವಜಾಗೊಂಡಿದೆ.

ಜುಲೈ 22ರಂದು ದರ್ಶನ್ ಪರ ವಕೀಲ ವಕೀಲ ರಾಘವೇಂದ್ರ ವಾದ ಮಂಡಿಸಿ, ದರ್ಶನ್‌ಗೆ ಜೈಲು ಊಟ ಜೀರ್ಣವಾಗುತ್ತಿಲ್ಲ, ಅತಿಸಾರವಾಗುತ್ತಿದೆ. ಹೀಗಾಗಿ ಖಾಸಗಿ ಊಟ, ಹಾಸಿಗೆ ಕೆಳಲಾಗುತ್ತಿದೆ. ವಿಚಾರಣಾಧೀನ ಕೈದಿಗೆ ಮನೆಯೂಟ ಪಡೆಯಲು ಅವಕಾಶವಿದೆ. ತನಿಖೆ ಪೂರ್ಣವಾಗದ ಸಂಧರ್ಬದಲ್ಲಿ ಮನೆ ಊಟ ನೀಡಲು ಅವಕಾಶವಿದೆ.

ಕರ್ನಾಟಕ ಕಾರಾಗೃಹ ಕಾಯ್ದೆ ಪ್ರಕಾರ ಸಿವಿಲ್ ಕೈದಿ ಹಾಗೂ ವಿಚಾರಣಾಧೀನ ಕೈದಿಗೆ ಸ್ವಂತ ಹಣದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಅಧಿಕಾರಿಗಳೇ ರೇಷನ್ ನೀಡಬೇಕು. ಸೆಂಟ್ರಲ್ ಕಿಚನ್‌ನಲ್ಲಿ ಅಡುಗೆ ಮಾಡಿಕೊಳ್ಳಲು ಅವಕಾಶವಿದೆ ಎಂದು ಮನವಿ ಸಲ್ಲಿಸಿದ್ದರು.

ಎಸ್‌ಪಿಪಿ ಪ್ರಸನ್ನ ಕುಮಾರ್ ಪ್ರತಿವಾದ ಆರಂಭಿಸಿ, ಜೈಲು ಊಟ ಜೀರ್ಣವಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಮೆಡಿಕಲ್ ರಿಪೋರ್ಟ್ ಕೋರ್ಟ್‌ಗೆ ಸಲ್ಲಿಸಿದ್ದೇವೆ. ನ್ಯಾಯಾಂಗ ಬಂಧನಕ್ಕೆ ಕಳುಹಿಸುವಾಗ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದೆ. ಅವರಿಗೆ ಆರ್ಥೋಪೆಡಿಕ್ ಸಮಸ್ಯೆ ಇದೆ. ಅದಕ್ಕೆ ಮೊದಲು ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅದನ್ನ ಮುಂದುವರಿಸಲು ಸೂಚನೆ ನೀಡಿದ್ದರು. ಈಗ ಡಯಟ್ ಪುಡ್ ಕೇಳಿದ್ದಾರೆ.

ಅದಕ್ಕೆ ಸಂಬಂಧಿಸಿದಂತೆ ಜೈಲು ಮ್ಯಾನ್ಯುವಲ್ ಪ್ರಕಾರ ಏನೇನು ನೀಡಬೇಕೋ ಅದನ್ನು ನೀಡುತ್ತಿದ್ದೇವೆ. ಜೈಲು ಕೈಪಿಡಿಯಲ್ಲಿ ಮನೆ ಊಟ ಎಂಬ ಪದವೇ ಇಲ್ಲ. ಹುಷಾರಿಲ್ಲದ ವೇಳೆ ಎಕ್ಟ್ರಾ ಡಯಟ್ 30 ದಿನ ನೀಡಬಹುದು. ವಾರದಲ್ಲಿ ಒಂದು ದಿನ ಮೊಟ್ಟೆ ಹಾಗೂ ಬಾಳೆ ಹಣ್ಣು ನೀಡಬಹುದು. ಜ್ವರ ಇದ್ದಾಗ ಬಿಸಿ ನೀರು ನೀಡುತ್ತಾರೆ. ಪ್ರತಿದಿನ ಬಿರಿಯಾನಿ ತಿನ್ನಬೇಕು ಅಂದರೆ ನಿಯಮದಲ್ಲಿ ಅವಕಾಶ ಇಲ್ಲ ಎಂದು ತಿಳಿಸಿದ್ದರು.