ಬಂಟ್ವಾಳ: ಕೊಳ್ತಮಜಲು ಜುಮ್ಮಾ ಮಸೀದಿ ಕಾರ್ಯದರ್ಶಿ, ಪಿಕಪ್ ವಾಹನ ಚಾಲಕ ಅಬ್ದುಲ್ ರಹೀಂ (32) ಅವರ ಕೊಲೆ ಮತ್ತು ಕಲಂದರ್ ಶಫಿ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೀಪಕ್ ಮತ್ತು ಸುಮಿತ್ ಆಚಾರ್ಯ ಸೇರಿದಂತೆ 15 ಮಂದಿಯ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ದೂರಿನ ಪ್ರಕಾರ, ಅಬ್ದುಲ್ ರಹೀಂ ಮತ್ತು ಕಲಂದರ್ ಶಫಿ ಇಬ್ಬರಿಗೂ ಪರಿಚಯವಿದ್ದ ದೀಪಕ್ ಮತ್ತು ಸುಮಿತ್ ಆರೋಪಿಗಳಲ್ಲಿ ಸೇರಿದ್ದಾರೆ. ಘಟನೆ ನಡೆದ ದಿನ, ರಹೀಂ ಮತ್ತು ಶಫಿ ಅವರು ಹೊಳೆಯಿಂದ ಮರಳನ್ನು ಪಿಕಪ್‌ಗೆ ತುಂಬಿಕೊಂಡು ಕುರಿಯಾಳ ಗ್ರಾಮದ ಈರಾ ಕೋಡಿಯ ರಾಜೀವಿ ಎಂಬವರ ಮನೆಗೆ ತಲುಪಿಸುತ್ತಿದ್ದರು. ಈ ವೇಳೆ ದೀಪಕ್, ಸುಮಿತ್ ಮತ್ತು 15 ಜನರ ಗುಂಪೊಂದು ಏಕಾಏಕಿ ಅವರ ಮೇಲೆ ದಾಳಿ ಮಾಡಿದೆ ಎಂದು ವರದಿಯಾಗಿದೆ.
ದಾಳಿಕೋರರು ಅಬ್ದುಲ್ ರಹೀಂ ಅವರನ್ನು ಚಾಲಕನ ಸೀಟಿನಿಂದ ಹೊರಗೆ ಎಳೆದು ತಲ್ವಾರ್, ಚಾಕು ಮತ್ತು ಕಬ್ಬಿಣದ ರಾಡ್‌ಗಳಿಂದ ಬರ್ಬರವಾಗಿ ಹಲ್ಲೆ ನಡೆಸಿದ್ದಾರೆ. ಕಲಂದರ್ ಶಫಿ ಅವರನ್ನು ರಕ್ಷಿಸಲು ಮುಂದಾದಾಗ ತಲ್ವಾರ್‌ನಿಂದ ಅವರ ಎದೆ, ಬೆನ್ನು ಮತ್ತು ಕೈಗೆ ಇರಿದಿದ್ದಾರೆ. ಅಲ್ಲಿದ್ದವರು ಕೂಗಾಡಿದ್ದರಿಂದ ಹಲ್ಲೆ ಮಾಡಿದ ಆರೋಪಿಗಳು ಮಾರಕಾಸ್ತ್ರಗಳೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಕಲಂದರ್ ಶಫಿ ಅವರನ್ನು ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಸಾಗಿಸುವಾಗ, ದಾಳಿಕೋರರಲ್ಲಿ ದೀಪಕ್ ಮತ್ತು ಸುಮಿತ್ ಎಂಬ ಇಬ್ಬರು ಪರಿಚಯಸ್ಥರು ಎಂದು ಮಾಹಿತಿ ನೀಡಿದ್ದರು. ಈ ಮಾಹಿತಿಯನ್ನು ಮೊಹಮ್ಮದ್ ನಿಸಾರ್ ಅವರು ಪೊಲೀಸರಿಗೆ ತಿಳಿಸಿದ್ದು, ಅವರೇ ಶಫಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ನಂತರ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

