ಮೈಸೂರು: ಯುವಕನೊಬ್ಬನನ್ನು ಸ್ನೇಹಿತರೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮೈಸೂರಿನ ಶಾಂತಿ ನಗರದಲ್ಲಿ ನಡೆದಿದೆ. ಮೈಸೂರಿನಲ್ಲಿ ಬೆಳ್ಳಂಬೆಳ್ಳಗೆ ಭೀಕರ ಕೊಲೆಯಾಗಿದ್ದು. ಮೈಸೂರಿನಲ್ಲಿ ಮಾರಕಾಸ್ತ್ರಗಳು ಝುಳುಪಿಸಿವೆ.

ಮುಂಜಾನೆ 5.40ರ ಸುಮಾರಿಗೆ ಈ ಘಟನೆ ನಡೆದಿದ್ದು, 19 ವರ್ಷದ ಸಯ್ಯದ್ ಸೂಫಿ ಯನ್ ಎಂಬಾತನೇ ಕೊಲೆಯಾದ ಯುವಕ. ವೈಯಕ್ತಿಕ ದ್ವೇಷವೇ ಹತ್ಯೆಗೆ ಕಾರಣವಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮದ್ಯ ವ್ಯಸನಿಗಳಾಗಿದ್ದ ಇಬ್ಬರು ಸ್ನೇಹಿತರಿಂದಲೇ ಸಯ್ಯದ್ ಸೂಫಿಯನ್ ಕೊಲೆಯಾಗಿದ್ದು, ಪರಸ್ಪರ ಹೊಡೆದಾಟದಲ್ಲಿ ಹತ್ಯೆ ಮಾಡಲಾಗಿದೆ. ಈ ಹಿಂದೆ ಸಯ್ಯದ್ ಹಾಗೂ ದುಷ್ಕರ್ಮಿಗಳ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ.

ಸಹಾಯಕ್ಕೆ ಬಾರದ ಜನ

ಮದ್ಯವ್ಯಸನಿ ಯುವಕರು ಸಯ್ಯದ್‌ ಸೂಫಿಯನ್ ಜೊತೆ ಹೊಡೆದಾಡಿಕೊಂಡಿದ್ದು, ರಸ್ತೆಯಲ್ಲೇ ಅಟ್ಟಾಡಿಸಿ ಎದೆ ಹಾಗೂ ಬೆನ್ನಿನ ಭಾಗಕ್ಕೆ ಚಾಕುವಿನಿಂದ ಚುಚ್ಚಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಯಾರೊಬ್ಬರೂ ಯುವಕನ ಸಹಾಯಕ್ಕೆ ಬಾರದ ಹಿನ್ನೆಲೆಯಲ್ಲಿ ಆತ ರಸ್ತೆಯಲ್ಲಿ ನರಳಿ ನರಳಿ ಪ್ರಾಣ ಬಿಟ್ಟಿದ್ದಾನೆ.

ಕೊಲೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ಸಯ್ಯದ್ ನನ್ನು ಇರಿದು ಕೊಲೆ ಮಾಡಿರುವ ದೃಶ್ಯ ಪಕ್ಕದ ಅಂಗಡಿಯೊಂದರಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಯ್ಯದ್ ಕಾವೇರಿ ಸಿಲ್ಕ್ ಸ್ಯಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಗೊತ್ತಾಗಿದೆ.

ಗಾಂಜಾ, ಡ್ರಗ್ಸ್ ಸೇವಿಸಿ ಕೊಲೆ

ಗಾಂಜಾ, ಡ್ರಗ್ಸ್ ಸೇವಿಸಿದ್ದ ಸ್ನೇಹಿತರಿಂದಲೇ ತಮ್ಮ ಮಗನ ಕೊಲೆ ನಡೆದಿದೆ ಎಂದು ಸೂಫಿಯನ್ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಶಾಂತಿನಗರದಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿದೆ. ಚಿಕ್ಕ ಚಿಕ್ಕ ಮಕ್ಕಳೂ ಡ್ರಗ್ಸ್ ಸೇವನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸೂಫಿಯನ್  ನಮಾಜ್‌ಗೆ ಹೋಗಿದ್ದ. ನಂತರ ಟೀ ಕುಡಿಯುವಾಗ ಸ್ನೇಹಿತರೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಿ. ಇಲ್ಲವಾದರೆ ನಮ್ಮನ್ನೂ ಕೊಲೆ ಮಾಡಿ ಎಂದು ಸೂಫಿಯನ್ ತಾಯಿ ಗೋಳಾಡಿದ್ದಾರೆ.

ದಸರಾ ನಂತರ 3ನೇ ಘಟನೆ

ದಸರಾ ಬಳಿಕ ನಗರದಲ್ಲಿ ಮೂರು ಹತ್ಯೆ ಪ್ರಕರಣಗಳು ನಡೆದಿವೆ. ಮೃಗಾಲಯದ ಬಳಿ ಹಾಡಹಗಲೇ ವೈಯಕ್ತಿಕ ದ್ವೇಷದಿಂದ ರೌಡಿಯೊಬ್ಬನ ಹತ್ಯೆ ನಡೆದಿತ್ತು. ನಂತರ, ಎರಡೇ ದಿನಗಳ ಅಂತರದಲ್ಲಿ ವಸ್ತುಪ್ರದರ್ಶನದ ಸಮೀಪ ಬಲೂನ್ ಮಾರುವ ಸಲುವಾಗಿ ಪೋಷಕರ ಜತೆ ನಗರಕ್ಕೆ ಬಂದಿದ್ದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಈ ಪ್ರಕರಣಗಳು ಮಾಸುವ ಮುನ್ನವೇ ಶಾಂತಿನಗರದಲ್ಲಿ ಈ ಯುವಕನ ಹತ್ಯೆಯಾಗಿದೆ.