ಪೀಣ್ಯ: ಗೌರಿಬಿದನೂರಿನಿಂದ ದಾಸರಹಳ್ಳಿಗೆ ಮರಳುತ್ತಿದ್ದಾಗ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ 6 ಮಂದಿ ಪೈಕಿ ತಂದೆ ಮತ್ತು ಮಗ ಸ್ಥಳದಲ್ಲೇ ಸಾವನ್ನಪ್ಪಿ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತೋಟಗೆರೆ ಬಳಿ ಶುಕ್ರವಾರ ನಡೆದಿದೆ.

ಗೌರಿಬಿದನೂರು ಮೂಲದ ಸಾಫ್ಟ್‌ವೇರ್‌ಎಂಜಿನಿಯರ್‌ಹರೀಶ್‌ (39), ಅವರ ತಂದೆ ವೀರಭದ್ರ (80) ಮೃತರು. ತಾಯಿ ಗೌರಮ್ಮ (62), ಹರೀಶ್‌ ಪತ್ನಿ ಮೈತ್ರಿ (32), ಮಗಳು ಸಿರಿ (10), ಚಿಕ್ಕಮ್ಮನ ಮಗಳು ವಂದನ (8) ಗಂಭೀರ ಗಾಯ ಗೊಂಡಿದ್ದು, ನೆಲಮಂಗಲ ದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳಕ್ಕೆ ಮಾದನಾ ಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಹರೀಶ್‌ ಗುರುವಾರ ದಾಸರಹಳ್ಳಿಯಲ್ಲಿ ರುವ ಸ್ವಂತ ಮನೆಯಿಂದ ಹುಟ್ಟೂರು ಗೌರಿಬಿದನೂರಿಗೆ ತೆರಳಿದ್ದರು. ಹುಟ್ಟೂರಿನಲ್ಲಿ ಜಮೀನು ನೋಡಿಕೊಂದು ಕುಟುಂಬದವರ ಜೊತೆ ಸಮಯ ಕಳೆದು ವಾಪಸ್‌ ಆಗುತ್ತಿದ್ದರು.

ಸಂಜೆ 6 ಗಂಟೆಗೆ ಗೌರಿಬಿದನೂರಿನಿಂದ ಹೊರಟಿದ್ದ ಕುಟುಂಬ, ಹರೀಶ್‌ ಡ್ರೆ„ವಿಂಗ್‌ ಮಾಡುತ್ತಿದ್ದರು. ರೈಲ್ವೆ ಗೊಲ್ಲಹಳ್ಳಿಯಿಂದ ಹೆಸರಘಟ್ಟ ಮಾರ್ಗವಾಗಿ ದಾಸರಹಳ್ಳಿಗೆ ತೆರಳುತ್ತಿದ್ದರು. ಆದರೆ ದಾರಿ ಮಧ್ಯೆ ತೋಟದ ಗುಡ್ಡದಹಳ್ಳಿ ಟರ್ನಿಂಗ್‌ ಬಳಿ ಲಾರಿಯೊಂದನ್ನು ಓವರ್‌ಟೇಕ್‌ ಮಾಡಲು ಮುಂದಾಗಿದ್ದಾರೆ. ಈ ವೇಳೆ ಎದುರಗಡೆ ಬಂದ ಲಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಬಲಭಾಗಕ್ಕೆ ಎಳೆದಿದ್ದಾರೆ. ಸಂಜೆ 7:30 ಆಗಿದ್ದರಿಂದ ಕತ್ತಲಲ್ಲಿ ಎದುರಿಗೆ ಇದ್ದ ಮರಕ್ಕೆ ಕಾರು ಡಿಕ್ಕಿ ಹೊಡೆದಿದ್ದು, ಹರೀಶ್‌ ಹಾಗೂ ತಂದೆ ವೀರಭದ್ರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.