ಚಿಕ್ಕಮಗಳೂರು: ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದು ಮನೆಗೆ ನುಗ್ಗಿದ ದುಷ್ಕರ್ಮಿಗಳು ತಂದೆ ಹಾಗೂ ಮಗನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬಳ್ಳೇಕೆರೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ವಿಜಯ್ ಕುಮಾರ್ ಹಾಗೂ ಪುತ್ರ ಅಭಿಷೇಕ್ ಮೇಲೆ ದುಷ್ಕರ್ಮಿಗಳು ಮಾರಣಾಂತಿ ಹಲ್ಲೆ ನಡೆಸಿದ್ದಾರೆ. ಬೈಕ್‌ನಲ್ಲಿ ಆಗಮಿಸಿದ ದುಷ್ಕರ್ಮಿಗಳು ಏಕಾಏಕಿ ಮನೆಯ ಕಂಪೌಂಡ್‌ನೊಳಗೆ ನುಗ್ಗಿ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ. ಇದರ ಬೆಚ್ಚಿ ಬೀಳಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಲ್ಲೆಯನ್ನು ಸುನೀಲ್ ಹಾಗೂ ರಂಗಾ ಎಂಬುವವರು ನಡೆಸಿದ್ದಾಗಿ ತಿಳಿದುಬಂದಿದೆ.
ಈ ಘಟನೆ ಡಿಸೆಂಬರ್ 17ರ ರಾತ್ರಿ ನಡೆದಿದ್ದು, ಹಲ್ಲೆಗೊಳಗಾದವರು ಕಡೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆದರೆ ಪೊಲೀಸರು ಮಾತ್ರ ದುಷ್ಕರ್ಮಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆ ಮನೆ ಮಂದಿ ಕಡೂರು ಪೊಲೀಸ್ ಠಾಣೆ ಸಿಬ್ಬಂದಿಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

