ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಆರೋಪಿ ನಟ ದರ್ಶನ್ ರೌಡಿ ಶೀಟರ್​​ಗಳೊಂದಿಗೆ ಬಿಂದಾಸ್ ಆಗಿ ಟೀ ಸೇವಿಸುತ್ತಾ, ಸಿಗರೇಟ್ ಸೇವನೆ ಮಾಡುತ್ತಿರುವ ಫೋಟೋ ಇಂದು ವೈರಲ್ ಆಗಿದ್ದು, ಭಾರೀ ಟೀಕೆಗೆ ಗುರಿಯಾಗಿದೆ.

ಇದರ ಬೆನ್ನಲ್ಲೇ ಆಂತರಿಕ ತನಿಖೆ ಮಾಡುವಂತೆ ಇದೀಗ ಪರಪ್ಪನ ಅಗ್ರಹಾರದ ಡಿಜಿ ಮಾಲಿನಿ ಕೃಷ್ಣಮೂರ್ತಿ ಅವರು ಆದೇಶ ಹೊರಡಿಸಿದ್ದಾರೆ. ಇದರಿಂದ ದರ್ಶನ್​​ಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದ್ದು, ರೌಡಿಗಳ ಜೊತೆ ದರ್ಶನ್ ಬಿಂದಾಸ್ ಆಗಿ ಹೇಗೆ ಇದ್ದರು.

ಸ್ಥಳಕ್ಕೆ ಹೋಗಿ ಪರಿಶೀಲಿಸಿ. ಸಿಸಿಟಿವಿ ಸಾಕ್ಷ್ಯಾಗಳನ್ನು ಸಂಗ್ರಹಿಸಿ, ಜೈಲು ಅಧಿಕಾರಿಗಳನ್ನು ವಿಚಾರಿಸಿ ವರದಿ ನೀಡಬೇಕು ಎಂದು ಪೊಲೀಸ್ ಅಧಿಕಾರಿಗಳಾದ ಆನಂದ ರೆಡ್ಡಿ ಮತ್ತು ಸೋಮಶೇಖರ್ ಅವರಿಗೆ ಆದೇಶ ಮಾಡಿದ್ದಾರೆ. ಇಂದು ರಾತ್ರಿ ಅಥವಾ ನಾಳೆ ಅಧಿಕಾರಿಗಳು ಜೈಲಿಗೆ ಭೇಟಿ ನೀಡುವ ಸಾಧ್ಯತೆ ಇದೆ.

ಇನ್ನು ನಟ ದರ್ಶನ್ ರೌಡಿಶೀಟರ್​​​ಗಳಾದ ಕುಳ್ಳ ಸೀನು, ವಿಲ್ಸನ್ ಗಾರ್ಡನ್ ನಾಗ ಹಾಗೂ ದರ್ಶನ್​​ ಮ್ಯಾನೇಜರ್ ಹಾಗೂ ಕೊಲೆ ಆರೋಪಿಯೂ ಆದ ನಾಗರಾಜನೊಂದಿಗೆ ಬಿಂದಾಸ್ ಆಗಿ ಜೈಲಿನ ಬ್ಯಾರಕ್ ಹೊರಗೆ ಚೇರ್​​ ಮೇಲೆ ಕುಳಿತಿರುವ ಫೋಟೋ ಸಂಚಲನ ಮೂಡಿಸಿದ್ದು, ಈ ಬೆನ್ನಲ್ಲೇ ಡಿಜಿ ಆದೇಶ ಮಾಡಿದ್ದಾರೆ.