ಬೆಂಗಳೂರು: ಕೋರಮಂಗಲದ ಮಹಿಳೆಯರ ಪಿಜಿಯಲ್ಲಿ ಯುವತಿಯ ಹತ್ಯೆ ಪ್ರಕರಣದ ಆರೋಪಿಯನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ.
ಜು.23 ರಂದು ನಡೆದಿದ್ದ ಕೃತಿ ಕುಮಾರಿಯ ಹತ್ಯೆ ಕೇಸ್ ಆರೋಪಿ ಅಭಿಷೇಕ್‌ನನ್ನು ಶನಿವಾರ ಮಧ್ಯಪ್ರದೇಶದಲ್ಲಿ ಪೊಲೀಸರು ಬಂಧಿಸಿ, ವಿಮಾನದ ಮೂಲಕ ಬೆಂಗಳೂರಿಗೆ ಕರೆತಂದಿದ್ದರು.
ಬಳಿಕ ಕೋರ್ಟ್ ಮುಂದೆ ಹಾಜರು ಪಡಿಸಿದ್ದರು. ಈ ವೇಳೆ ವಿಚಾರಣೆ ನಡೆಸಲು ಅವಕಾಶ ಕೋರಿದ್ದರಿಂದ ಕೋರ್ಟ್ 10 ದಿನಗಳ ಕಾಲ ಕಸ್ಟಡಿಗೆ ನೀಡಿ ಆದೇಶಿಸಿತು. ಈ ಕುರಿತು ಪ್ರತಿಕ್ರಿಯೆ ನೀಡಿದ ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತೀಮಾ, ಕೃತಿ ಕುಮಾರಿ ಕೊಲೆ ಪ್ರಕರಣದಲ್ಲಿ ಮಧ್ಯಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಿದ್ದೇವೆ. ಈಗಷ್ಟೇ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ.
ಯಾವ ಕಾರಣಕ್ಕೆ ಕೊಲೆಯಾಗಿದೆ ಅನ್ನೋದು ತಿಳಿಯಬೇಕಿದೆ. ಆರೋಪಿ ಅಭಿಷೇಕ್ ಎಂಬಿಎ ಓದಿಕೊಂಡು ಬೆಂಗಳೂರಿಗೆ ಬಂದಿದ್ದಾನೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ. ಆರೋಪಿ ತನ್ನ ಸಹೋದರನ ಜೊತೆಗೆ ವಾಸವಿದ್ದ ಅನ್ನೋದು ಗೊತ್ತಾಗಿದೆ. ಆರೋಪಿಯ ವಿಚಾರಣೆಯ ನಂತರವಷ್ಟೇ ಎಲ್ಲಾ ವಿಚಾರಗಳು ತಿಳಿಯಬೇಕಿದೆ ಎಂದು ಹೇಳಿದ್ದಾರೆ.

