ಮುಜಾಫರ್​​ಪುರ: ಮೂರು ವರ್ಷದ ಮಗುವನ್ನು ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಇಂದು ಬಿಹಾರದ ಮುಜಾಫರ್‌ಪುರ ಜಿಲ್ಲೆಯ ದಿಘ್ರಾ ಗ್ರಾಮದಲ್ಲಿ ನಡೆದಿದ್ದು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯಂಗಳದಲ್ಲಿ ಆಟವಾಡುತ್ತಿದ್ದ 3 ವರ್ಷದ ಮಗುವನ್ನು ಹತ್ಯೆ ಮಾಡಲಾಗಿದೆ. ಈ ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಗಾಯಗೊಂಡಿದ್ದ ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಮಗುವನ್ನು ತನ್ನ ಇತರ ಸ್ನೇಹಿತರೊಂದಿಗೆ ಆರೋಪಿಯ ಮನೆಯ ಹೊರಗೆ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಗ್ರಾಮದ ನಿವಾಸಿಗಳು ತಿಳಿಸಿದ್ದಾರೆ. ಮಕ್ಕಳು ತಮ್ಮ ಮನೆಯ ಹೊರಗೆ ಆಟವಾಡುವುದು ಆರೋಪಿಗಳ ಕುಟುಂಬಕ್ಕೆ ಇಷ್ಟವಿರಲಿಲ್ಲ. ಇದೇ ಕಾರಣಕ್ಕೆ ಮಕ್ಕಳು ಅವರ ಮನೆಯೆದುರು ಆಡುವಾಗ 3 ವರ್ಷದ ಮಗುವಿಗೆ ಚಾಕುವಿನಿಂದ ಇರಿದಿದ್ದಾರೆ.

ಮಂಗಳವಾರ ಸಂಜೆ ಮಕ್ಕಳು ಆರೋಪಿಯ ಮನೆಯ ಹೊರಗೆ ಆಟವಾಡುತ್ತಿದ್ದಾಗ ಅವರು ಹೊರಗೆ ಬಂದು ಬಾಲಕನಿಗೆ ಚಾಕುವಿನಿಂದ ಇರಿದಿದ್ದು, ಆರೋಪಿ ಮಾನಸಿಕ ಅಸ್ವಸ್ಥ ಎಂದು ಸ್ಥಳೀಯರು ಹೇಳಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.