ಬಿಹಾರ: ಐದು ವರ್ಷದ ಬಾಲಕ 3 ವರ್ಷದ ಮಗುವಿನ ಮೇಲೆ ಶಾಲೆಯಲ್ಲಿ ಗುಂಡು ಹಾರಿಸಿರುವ ಘಟನೆ  ಬಿಹಾರದ ಸುಪಾಲ್ ಜಿಲ್ಲೆಯ ತ್ರಿವೇಣಿಗಂಜ್​ನ ಲಾಲ್​ಪಟ್ಟಿಯಲ್ಲಿರುವ ಸೇಂಟ್​ ಜಾನ್ಸ್​ ಬೋರ್ಡಿಂಗ್ ಸ್ಕೂಲ್​ನಲ್ಲಿ ನಡೆದಿದೆ.

ಗುಂಡು ಮಗುವಿನ ಎಡಗೈಗೆ ತಗುಲಿದ್ದು, ಗಂಭೀರವಾಗಿ ಗಾಯಗೊಂಡಿದೆ. ಗಾಯಗೊಂಡ ವಿದ್ಯಾರ್ಥಿಯನ್ನು ಆಸಿಫ್ ಎಂದು ಗುರುತಿಸಲಾಗಿದೆ.

ಈತ ಐದು ವರ್ಷದ ಬಾಲಕನಾಗಿದ್ದು, ಶಾಲೆಗೆ ಬಂದ ಕೂಡಲೇ ಪ್ರಾರ್ಥನೆ ಸಲ್ಲಿಸುವ ಮುನ್ನ ತನ್ನ ಬ್ಯಾಗ್​ನಿಂದ ಬಂದೂಕು ತೆಗೆದು ಗುಂಡು ಹಾರಿಸಿದ್ದಾನೆ. ಆಸಿಫ್​ನನ್ನು ನಗರದ ತ್ರಿವೇಣಿಗಂಜ್​ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿ ಚಿಕಿತ್ಸೆ ನಿಡಲಾಗುತ್ತಿದೆ.

ಆರೋಪಿಯಾಗಿರುವ ಬಾಲಕ ಅಲ್ಲಿಂದ ಓಡಿಹೋಗಿದ್ದಾನೆ, ಶಾಲೆಯ ಆಡಳಿತ ಮಂಡಳಿಯ ಪ್ರಕಾರ, ಘಟನೆ ನಂತರ ಎರಡೂ ಮಕ್ಕಳ ಕುಟುಂಬದವರನ್ನು ಶಾಲೆಗೆ ಕರೆಸಲಾಯಿತು.

ಇದೇ ವೇಳೆ ವಿದ್ಯಾರ್ಥಿ ಏಕಲವ್ಯ ಕೂಡ ಶಾಲೆಯ ಪ್ರಾಂಶುಪಾಲರ ಚೇಂಬರ್​ನಲ್ಲಿದ್ದು, ಆತನ ತಂದೆ ಮುಕೇಶ್​ ಯಾದವ್ ಕೂಡ ಅಲ್ಲಿದ್ದರು. ಘಟನೆ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಮುಕೇಶ್​ ಯಾದವ್ ಆಯುಧ ಸಮೇತ ತನ್ನ ಮಗುವಿನೊಂದಿಗೆ ಓಡಿ ಹೋಗಿದ್ದಾರೆ. ಆ ವೇಳೆ ಗಾಯಗೊಂಡ ಮಗುವಿನ ಕುಟುಂಬಸ್ಥರು ಆತನಿಂದ ಪಿಸ್ತೂಲ್ ಕಸಿದುಕೊಂಡಿದ್ದಾರೆ.

ಘಟನೆಯ ನಂತರ ಕೋಪಗೊಂಡ ಕುಟುಂಬಸ್ಥರು ಶಾಲೆಯನ್ನು ಧ್ವಂಸಗೊಳಿಸಿದ್ದಾರೆ. ಈ ಬಗ್ಗೆ ತ್ರಿವೇಣಿಗಂಜ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸದ್ಯ ಬಾಲಕ ಹಾಗೂ ಆತನ ಕುಟುಂಬದವರು ತಲೆಮರೆಸಿಕೊಂಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದು, ಇಷ್ಟೊಂದು ದೊಡ್ಡ ನಿರ್ಲಕ್ಷ್ಯ ಹೇಗಾಯಿತು ಎಂದು ಶಾಲಾ ಆಡಳಿತ ಮಂಡಳಿಯನ್ನು ಪ್ರಶ್ನಿಸಲಾಗುತ್ತಿದೆ.