ಉತ್ತರ ಪ್ರದೇಶ: ಮಹಿಳೆಯರ, ಹೆಣ್ಣು ಮಕ್ಕಳ ಮೇಲಾಗುತ್ತಿರುವ ಕಿರುಕುಳ, ಲೈಂಗಿಕ ದೌರ್ಜನ್ಯಗಳ ಸುದ್ದಿಗಳು ಪ್ರತಿನಿತ್ಯ ಕೇಳಿ ಬರುತ್ತಲೇ ಇವೆ. ಇದೀಗ ಅಂತಹದ್ದೇ ನಾಚಿಕೆಗೇಡಿನ ಕೃತ್ಯವೊಂದು ಬೆಳಕಿಗೆ ಬಂದಿದ್ದು, ಅಂಗಡಿಗೆ ತಿಂಡಿ ತಿನಿಸು ಖರೀದಿಸಲು ಬಂದಿದ್ದ ಪುಟ್ಟ ಬಾಲಕಿಗೆ ತಿಂಡಿ ಕೊಟ್ಟು 70 ವರ್ಷದ ಮುದುಕನೊಬ್ಬ ಆ ಬಾಲಕಿಯ ಖಾಸಗಿ ಅಂಗ ಮುಟ್ಟಿ ವಿಕೃತಿ ಮೆರೆದಿದ್ದಾನೆ.

ಈ ಕುರಿತ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದಿದ್ದು, ಅಂಗಡಿಗೆ ಬಂದಂತಹ ಬಾಲಕಿಯ ಜೊತೆ ವೃದ್ಧನೊಬ್ಬ ವರ್ತಿಸಿದ್ದಾನೆ. ಸಪ್ಟೆಂಬರ್‌ 3 ರಂದು ಅಪ್ರಾಪ್ತ ಬಾಲಕಿಯೊಬ್ಬಳು ಮೊಹಮ್ಮದ್‌ ಅನ್ವರ್‌ (70) ಎಂಬಾತನ ಪೆಟ್ಟಿ ಅಂಗಡಿಗೆ ತಿಂಡಿ ತಿನಿಸು ಖರೀದಿಸಲು ಬಂದಿದ್ದು, ಆ ಸಂದರ್ಭದಲ್ಲಿ ಚಾಕಲೇಟ್‌ ಕೊಡುವ ನೆಪದಲ್ಲಿ ಬಾಲಕಿಯನ್ನು ಹತ್ತಿರ ಕರೆಸಿಕೊಂಡು ಖಾಸಗಿ ಅಂಗ ಮುಟ್ಟಿ ವಿಕೃತಿ ಮೆರೆದಿದ್ದಾನೆ. ಈತನ ಪೈಶಾಚಿಕ ಕೃತ್ಯವನ್ನು ಯಾರೋ ವಿಡಿಯೋ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ವೈರಲ್‌ ಆಗುತ್ತಿದ್ದಂತೆ ಸೀತಾಪುರ ಪೊಲೀಸರು ಪೋಕ್ಸೊ ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಅನ್ವರ್‌ನನ್ನು ಬಂಧಿಸಿದ್ದಾರೆ.