ಮಂಗಳೂರು : ಜಗತ್ತಿಗೆ ಶಾಂತಿ ಸಂದೇಶ ಸಾರಿದ ಯೇಸು ಕ್ರಿಸ್ತರ ಜನ್ಮದಾತೆ ಮಾತೆ ಮರಿಯಮ್ಮನ ಜನ್ಮದಿನ ಹಾಗೂ ಕರಾವಳಿಯ ವಿಶಿಷ್ಟ ‘ತೆನೆ ಹಬ್ಬ’ವನ್ನು (Monti Fest) ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಂದು (ಸೆ. 8) ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.
ಜಿಲ್ಲೆಯ ಎಲ್ಲಾ ಚರ್ಚ್‌ಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪ್ರಾರ್ಥನೆ ಮತ್ತು ಮೆರವಣಿಗೆಗಳು ನಡೆದವು. ಹಬ್ಬದ ಅಂಗವಾಗಿ ಕಳೆದ ಒಂಬತ್ತು ದಿನಗಳಿಂದ ಚರ್ಚ್‌ಗಳಲ್ಲಿ ನಡೆದಿರುವ ವಿಶೇಷ ‘ನೊವೇನಾ’ ಪೂಜೆಗಳು ಇಂದು ಸಂಪನ್ನಗೊಂಡವು. ಮುಂಜಾನೆಯಿಂದಲೇ ನೂರಾರು ಸಂಖ್ಯೆಯಲ್ಲಿ ಚರ್ಚ್‌ಗಳಿಗೆ ಆಗಮಿಸಿದ ಭಕ್ತರು, ವಿಶೇಷವಾಗಿ ಪುಟಾಣಿ ಮಕ್ಕಳು ತಮ್ಮ ತೋಟಗಳಿಂದ ತಂದಿದ್ದ ವರ್ಣರಂಜಿತ ಹೂವುಗಳನ್ನು ಮಾತೆ ಮರಿಯಮ್ಮನ ಮೂರ್ತಿಗೆ ಅರ್ಪಿಸಿ ಗೌರವ ಸಲ್ಲಿಸಿದರು.
ಕರಾವಳಿಯ ಕ್ರೈಸ್ತ ಬಾಂಧವರು ಈ ದಿನವನ್ನು ಕೃಷಿ ಹಾಗೂ ಹೊಸ ಸುಗ್ಗಿ ಹಬ್ಬವನ್ನಾಗಿ ಆಚರಿಸುತ್ತಾರೆ. ತಮ್ಮ ಗದ್ದೆ-ತೋಟಗಳಲ್ಲಿ ಬೆಳೆದ ಹೊಸ ಭತ್ತದ ತೆನೆಗಳನ್ನು ಕಟಾವು ಮಾಡಿ, ತಂದು ಚರ್ಚ್‌ನಲ್ಲಿ ಧರ್ಮಗುರುಗಳಿಂದ ಆಶೀರ್ವದಿಸಿಕೊಳ್ಳಲಾಯಿತು. ಬಳಿಕ ಆಶೀರ್ವದಿಸಿದ ಭತ್ತದ ತೆನೆಯನ್ನು ಮನೆಗೆ ಕೊಂಡೊಯ್ದು, ಅದರ ಹೊಸ ಅಕ್ಕಿ ಕಾಳುಗಳನ್ನು ಹಾಲಿನಲ್ಲಿ ಬೆರೆಸಿ ಕುಡಿಯುವುದು ಮತ್ತು ಪಾಯಸ ಮಾಡಿ ಸೇವಿಸುವುದು ಈ ಹಬ್ಬದ ಮುಖ್ಯ ಆಚರಣೆಯಾಗಿದೆ.
ದೂರದೂರಿನಲ್ಲಿ ಅಥವಾ ವಿದೇಶಗಳಲ್ಲಿರುವ ತಮ್ಮ ಬಂಧುಗಳಿಗೂ ಅಂಚೆ ಮೂಲಕ ಈ ಹೊಸ ಅಕ್ಕಿ ಕಾಳನ್ನು ಕಳುಹಿಸಿಕೊಡುವುದು ಕರಾವಳಿಯ ಕ್ರೈಸ್ತ ಬಾಂಧವರಲ್ಲಿರುವ ಅಪರೂಪದ ಸಂಪ್ರದಾಯ. ಸಾಮಾನ್ಯವಾಗಿ ಕರಾವಳಿ ಕ್ರೈಸ್ತ ಬಾಂಧವರು ಇತರ ಎಲ್ಲಾ ಹಬ್ಬಗಳಲ್ಲಿ ಮಾಂಸಾಹಾರ ಸೇವಿಸಿದರೆ, ‘ಮೊಂತಿ ಫೆಸ್ಟ್’ ದಿನದಂದು ಮಾತ್ರ ಸಂಪೂರ್ಣವಾಗಿ ಸಸ್ಯಾಹಾರ ಭೋಜನ ಸವಿಯುತ್ತಾರೆ. ವಿವಿಧ ಬಗೆಯ ತರಕಾರಿ ಪದಾರ್ಥಗಳನ್ನು ತಯಾರಿಸಿ, ಕುಟುಂಬಸ್ಥರೆಲ್ಲರೂ ಒಂದೇೆಡೆ ಕುಳಿತು ಒಟ್ಟಾಗಿ ‘ಪ್ರಥಮ ಭೋಜನ’ ಸೇವಿಸುವ ಮೂಲಕ ಕೌಟುಂಬಿಕ ಐಕ್ಯತೆಯನ್ನು ಮೆರೆದರು.

