ನಿಖರವಾಗಿ 40 ವರುಷಗಳ ಹಿಂದೆ….
1986, ಫೆಬ್ರವರಿ 6, ರೋಮನ್ ಕ್ಯಾಥೋಲಿಕ್ ಚರ್ಚಿನ ಪರಮಗುರು, ಕ್ರೈಸ್ತ ಸಮುದಾಯದ ಜಗದ್ಗುರು 2 ನೇ ಜೋನ್ ಪಾವ್ಲ್ ಅವರ ಪಾದಸ್ಪರ್ಶದಿಂದ ಪಾವನವಾದ ಪುಟ್ಟ ಊರು ಕರ್ನಾಟಕದ ಮಂಗಳೂರಿನ ನಮ್ಮ ಹೆಮ್ಮಯ ಬಜ್ಪೆ. ಇತಿಹಾಸದ ಆ ಅವಿಸ್ಮರಣೀಯ ದಿನ ಇಂದಿಗೂ ಬಜ್ಪೆಯ ನಾಗರಿಕರಿಗೆ ಜೀವಮಾನದ ಮರೆಯಲಾಗದ ದಿನವಾಗಿ ಉಳಿದಿದೆ.
ರೋಮನ್ ಕ್ಯಾಥೋಲಿಕ್ ಮಹಾಧರ್ಮಪೀಠದ ಪೋಪ್ ಪರಮೋಚ್ಚ ನಾಯಕರ ಇತಿಹಾಸಕ್ಕೆ 2026 ವರುಷಗಳ ಭವ್ಯ ಪರಂಪರೆ ಇದ್ದರೂ, ಈ 2026 ವರುಷಗಳಲ್ಲಿ 267 ಪೋಪ್ ಗಳು ಆಗಿಹೋದರೂ. ಭಾರತದ ನೆಲಕ್ಕೆ ಕಾಲಿಟ್ಟವರು ಕೇವಲ ಇಬ್ಬರೇ ಇಬ್ಬರು. 1964 ರಲ್ಲಿ ಪೋಪ್ ಪಾವ್ಲ್ VI, ಅವರು ಕ್ರೈಸ್ತ ಮಹಾಸಭೆಯ ಸಮಾವೇಶಕ್ಕೆ ಭಾಗವಹಿಸಲು ಮುಂಬೈಗೆ ಬಂದಿದ್ದರೂ ಅವರು ಅಲ್ಲಿಂದಲೇ ಹಿಂತಿರುಗಿದ್ದರು. ಅದು ಅಂದು ಒಂದು ಐತಿಹಾಸಿಕ ಭೇಟಿಯಾಗಿತ್ತು.
ನಂತರ 1986 ರಲ್ಲಿ ಬಂದವರೇ ಪೋಪ್ ಜಾನ್ ಪಾವ್ಲ್ II. ಅವರು ಭಾರತಕ್ಕೆ 2 ಬಾರಿ ಭೇಟಿ ನೀಡಿದರು. 1999 ರಲ್ಲಿ ಅಂತರಾಷ್ಟ್ರೀಯ ಮಟ್ಟದ ಬಿಷಪ್ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಬಂದಿದ್ದರಾದರೂ ಭಾರತದ ಇತರ ರಾಜ್ಯಗಳನ್ನು ಅವರು ಸಂದರ್ಶಿಸಿರಲಿಲ್ಲ. ಆದರೆ 1986, ಫೆಬ್ರವರಿಯಲ್ಲಿ ಬಂದ ಅವರು ಭಾರತದ 9 ರಾಜ್ಯಗಳ ಹಲವು ಸ್ಥಳಗಳನ್ನು ಸಂದರ್ಶಿಸಿದ್ದರು. ಧರ್ಮಗಳ ಸೌಹಾರ್ದಕ್ಕೆ ಕರೆ ನೀಡಿದರು. ಅವರನ್ನು ಕಾಣಲು ಕ್ರಿಶ್ಚಿಯನ್ ಮಾತ್ರವಲ್ಲದೆ, ಹಿಂದೂ ಮುಸ್ಲಿಮ್ ಜೈನ ಬೌದ್ಧ ಸಿಖ್ಖಾ ಪಾರಸಿಕ ಎಂದೆನ್ನದೆ ಎಲ್ಲಾ ಧರ್ಮಗಳ ಧಾರ್ಮಿಕ ಮುಖಂಡರು, ರಾಜಕಾರಣಿಗಳಿಂದ ಹಿಡಿದು ಕಟ್ಟಕಡೆಯ ಜನಸಾಮಾನ್ಯರವರೆಗೂ ಸೇರಿದ್ದರು. ಪೋಪರ ಭೇಟಿ ಎಲ್ಲೆಡೆ ಧರ್ಮಗಳನ್ನು ಹತ್ತಿರ ಬಹುಹತ್ತಿರ ತಂದಿತ್ತು.
ನಮ್ಮ ಕರ್ನಾಟಕಕ್ಕೆ ಭೇಟಿ ನೀಡಿದ ಮೊದಲ ಮತ್ತು ಏಕೈಕ ಪೋಪ್ ಕೂಡಾ ಅವರೊಬ್ಬರೇ. ಇಟಲಿಯ ರೋಮ್ ನಗರದ ಹೃದಯಭಾಗದ ವ್ಯಾಟಿಕನ್ ಸಿಟಿಯ ಅಪೋಸ್ಟೋಲಿಕ್ ಅರಮನೆಯಲ್ಲಿ ವಾಸಿಸುವ ಪೋಪ್ ಎಂಬ ಮಹಾನ್ ವ್ಯಕ್ತಿ ಅಂದು ಬೆಂಗಳೂರಿನ ಬದಲು ‘ ಪೂರ್ವದ ರೋಮ್’ ಎಂದು ಕರೆಯಲ್ಪಡುವ ಮಂಗಳೂರಿಗೆ ಬರುವಂತಾಗಲು ಕಾರಣ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಕನ್ನಡಿಗರ ಮತ್ತು ತಮಿಳರ ನಡುವಿನ ಸಂಘರ್ಷದ ಅನಾನುಕೂಲಕರ ವಾತಾವರಣ. ಹಾಗಾಗಿ ಆ ಮಹಾಭಾಗ್ಯ ಮಂಗಳೂರಿಗೆ ಪ್ರಾಪ್ತಿಯಾಗಿ, ಪೋಪರನ್ನು ಬರಮಾಡಿಕೊಳ್ಳುವ ಸೌಭಾಗ್ಯ ನನ್ನ ಪುಟ್ಟ ಊರು ಬಜ್ಪೆಗೆ ಲಭಿಸಿತ್ತು.
ಈಗಿನಂತೆ ಕೈಗೊಂದು ಕಾಲಿಗೊಂದು ವಾಹನ ಸೌಲಭ್ಯಗಳಿಲ್ಲದ ಕಾಲವದು. ಆ ಕಾರಣ ಬಜ್ಪೆಯ ಪ್ರತಿಯೊಂದು ಕ್ರಿಶ್ಚಿಯನ್ನರ ಮನೆಗಳು ಆ ಸಂದರ್ಭದಲ್ಲಿ ಮಂಗಳೂರು ಮತ್ತು ಸುತ್ತಮುತ್ತಲ ಊರುಗಳ ಮಾತ್ರವಲ್ಲ, ಕರ್ನಾಟಕದ ಹಲವು ತಾಣಗಳ ತಮ್ಮ ಬಂಧುಮಿತ್ರರಿಗೆ, ಪರಿಚಿತರಿಗೆ ಪೋಪ್ ಆಗಮನಕ್ಕಿಂತ ಒಂದೆರಡು ದಿನಗಳ ಮುಂಚಿತವಾಗಿಯೇ ವಾಸ್ತವ್ಯ ಹೂಡಲು ಅನುವು ಮಾಡಿಕೊಟ್ಟು ಊರ ಹಬ್ಬ ಸಾಂತ್ ಮಾರಿಯಂದು ನೆಂಟರಿಷ್ಟರಿಂದ ತುಂಬಿರುವುದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನಸಂದಣಿಯಿಂದ ಮಲಗಲೂ ಜಾಗವಿಲ್ಲದಂತೆ ಕಿಕ್ಕರಿದು ತುಂಬಿಹೋದಂತಾಗಿದ್ದವು. ವಾರದ ಮುಂಚೆಯೇ ದೂರದೂರುಗಳಿಂದ ಬಂದು ನಿಂತವರೂ ಇದ್ದರು. ಬಂದವರ ಸತ್ಕಾರ್ಯದಲ್ಲಿ ಬಜ್ಪೆಯ ನಾಗರಿಕರು ಧನ್ಯತಾಭಾವ ಹೊಂದಿದರು.
ನನ್ನ ಮನೆಯಲ್ಲಂತೂ ನಮ್ಮ ಸಂಬಂಧಿಕರು, ಜೊತೆಗೆ ಮಮ್ಮಿಯ ಟೆಲಿಕಾಂ ಡಿಪಾರ್ಟ್ಮೆಂಟ್ ನ ಕ್ರಿಶ್ಚಿಯನ್, ಹಿಂದೂ ಸಹೋದ್ಯೋಗಿಗಳೂ ಪೋಪರ ದರ್ಶನ ಭಾಗ್ಯಕ್ಕಾಗಿ ಮೊದಲ ದಿನಾನೇ ಬಂದು ನಿಂತಿದ್ದರು. ಬಜ್ಪೆಯ ಕ್ರೈಸ್ತ ಸಮುದಾಯದವರು ಮೆರೆದ ಅಂದಿನ ಔದಾರ್ಯ, ಹೃದಯ ವೈಶಾಲ್ಯತೆ ಈಗಲೂ ನೆನಪಿಸಿಕೊಳ್ಳುವವರು ಇದ್ದಾರೆ. ಹಿಂದೂ, ಮುಸ್ಲಿಮ್ ಬಾಂಧವರ ಬಾಯಲ್ಲಂತೂ ಆ ಸಮಯದಲ್ಲಿ ಒಂದೇ ಮಾತು ‘ಪೋಪೆರ್ ಬರ್ಪೆರ್’…. ಕನ್ನಡದಲ್ಲಿ ಅದರ ಅರ್ಥ ‘ಬರುತ್ತಾರೆ ಹೋಗುತ್ತಾರೆ’. ಆದರೆ ಅದು ಒಬ್ಬ ನಿರ್ದಿಷ್ಟ ಮಹಾನ್ ವ್ಯಕ್ತಿಯ ಆಗಮನ ನಿರ್ಗಮನವಾಗಿತ್ತು.
ಧರ್ಮಗಳ ಎಲ್ಲೆಗಳನ್ನು ಮೀರಿ ಅಸಂಖ್ಯಾತ ಹಿಂದೂ ಮುಸ್ಲಿಂ ಬಾಂಧವರು ಕರ್ನಾಟಕ ಮಾತ್ರವಲ್ಲ, ಕೇರಳ ತಮಿಳುನಾಡು ಆಂಧ್ರಪ್ರದೇಶ, ಹೀಗೆ 4 ರಾಜ್ಯಗಳ ಮೂಲೆಮೂಲೆಗಳಿಂದ ಪೋಪರನ್ನು ನೋಡಲು ಸೇರಿದ್ದರು. ಜಾಗದ ವಿಸ್ತರತೆ ಕಿರಿದಾದ್ದರಿಂದ ಮತ್ತು ಕ್ರೈಸ್ತ ಸಮುದಾಯವೇ ಅಗಣಿತ ಪ್ರಮಾಣದಲ್ಲಿದ್ದರಿಂದ ಹಲವು ಹಿಂದೂ ಮುಸ್ಲಿಂ ಬಾಂಧವರು ಅವಕಾಶದಿಂದ ವಂಚಿತರಾದರು. ಕ್ರೈಸ್ತ ಸಮುದಾಯದ ಅದರಲ್ಲೂ ವಿದೇಶಿ ಧಾರ್ಮಿಕ ವ್ಯಕ್ತಿಯೊಬ್ಬರನ್ನು ನೋಡಲು ಅಷ್ಟೊಂದು ಸಂಖ್ಯೆಯಲ್ಲಿ ಜನಜಂಗುಳಿ… ಅಂದಿನ ಕಾಲದಲ್ಲಿ ಬಹುಶಃ ಕರ್ನಾಟಕದ ಇತಿಹಾಸದಲ್ಲಿ ಅದೇ ಮೊದಲಿರಬೇಕು.
ನನ್ನ ನೆರೆಕೆರೆಯ ಅಡ್ಕಬಾರೆಯ ನನ್ನ ಆತ್ಮೀಯ ಕುಟುಂಬಗಳಿಗೆ ಸೇರಿದ ತರಕಾರಿ ಬೆಳೆಯಲ್ಪಡುವ ಫಲವತ್ತಾದ 10 ಎಕರೆ ಜಾಗವನ್ನು ಪೋಪ್ ಆಗಮನಕ್ಕಿಂತ 6 ತಿಂಗಳ ಮೊದಲೇ ಕೃಷಿಕದಲ್ಲಿ ಮಾತನಾಡಿ ನಿಗದಿ ಪಡಿಸಲಾಗಿತ್ತು. 12 ಅಡಿ ಎತ್ತರದಲ್ಲಿ ಶಿಲುಬೆಯಾಕಾರದಲ್ಲಿ ವಿಶಿಷ್ಟ ಶೈಲಿಯಲ್ಲಿ ಭವ್ಯ ವೇದಿಕೆಯನ್ನು ಕಟ್ಟಲಾಗಿತ್ತು. ಪೋಪ್ ಬರುವ ಮುಂಚಿನ ದಿನ ಘಮಘಮಿಸುವ ಮಲ್ಲಿಗೆ ಮತ್ತು ಸುವಾಸನೆಭರಿತ ಸೇವಂತಿಗೆ ಹೀಗೆ ಬಿಳಿ ಹಳದಿ ಹೂವುಗಳಿಂದ ಅಲಂಕರಿಸಲಾಗಿತ್ತು. ಪೆಂಡಲನ್ನು ಕೂಡಾ ಬಿಳಿ ಹಳದಿ ಬಣ್ಣದ ಬಟ್ಟೆಗಳಿಂದ ಶೃಂಗರಿಸಲಾಗಿತ್ತು. ಪೋಪರಿಗಾಗಿ ವೇದಿಕೆಯ ಮಧ್ಯದಲ್ಲಿ ಎತ್ತರದ ವಿಶಿಷ್ಟ ನಮೂನೆಯ ಕುರ್ಚಿಯನ್ನು ಇರಿಸಲಾಗಿತ್ತು. ಸ್ವಾಗತ ಕೋರಲು ಮಾರ್ಗಗಳಾದ್ಯಂತ ಕೆಂಪು ಕಾರ್ಪೆಟ್‌ಗಳನ್ನು ಹಾಸಲಾಗಿತ್ತು. ಸ್ವಾಗತ ಬ್ಯಾನರ್‌ಗಳಲ್ಲಿ ‘ಪೋಪ್ ಜಗದ್ಗುರುಗಳಿಗೆ ಸ್ವಾಗತ, ಭಾರತವು ನಿಮ್ಮನ್ನು ಪ್ರೀತಿಯಿಂದ ಸ್ವಾಗತಿಸುತಿದೆ’ ಎಂದು ಬರೆಯಲಾಗಿತ್ತು. 60 ಅಡಿ ಎತ್ತರದಲ್ಲಿ ಹಾರುತ್ತಿದ್ದ ತ್ರಿವರ್ಣ ಬಲೂನ್ ಸಭೆಗೆ ಶೋಭಾಯಮಾನವಾಗಿತ್ತು.
ಆ ಶುಭದಿನ ಬಂದೇ ಬಿಟ್ಟಿತ್ತು. ಸ್ಥಳದಲ್ಲಿ ಮುಂಜಾನೆಯಿಂದಲೇ ಜನ ಸೇರತೊಡಗಿದ್ದರು. ಈಗಿನಂತೆ ರಣಬಿಸಿಲು ಇಲ್ಲದಿದ್ದರೂ ಮಟಮಟ ಮಧ್ಯಾಹ್ನದ ಸುಡುಬಿಸಿಲಿನಲ್ಲಿ ವಿಮಾನ ಹಾರಾಟದ ಸದ್ದಿಗಾಗಿ ಬಿಸಿಲ ಪರಿವೆ ಇಲ್ಲದೆ ಆಗಸ ನೋಡುತ್ತಾ ಜನ ಕಾದರು. ಮಧ್ಯಾಹ್ನ 2.45 ಕ್ಕೆ ಮೈಕುಗಳಲ್ಲಿ ಘೋಷಿಸಲಾಯಿತು…. ‘ಪೋಪ್ ಬಜ್ಪೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ, 10 ನಿಮಿಷಗಳಲ್ಲಿ ವೇದಿಕೆಯನ್ನು ತಲುಪಲಿದ್ದಾರೆ’. ಹರಿವ ಬೆವರಿನಲ್ಲೂ ಜನರು ಪುಳಕಿತರಾದರು. 3 ಗಂಟೆಗೆ ಸರಿಯಾಗಿ ವಿಶೇಷ ಕಾರಿನಲ್ಲಿ ಸ್ಥಳಕ್ಕೆ ಬಂದ ಅವರ ಸ್ವಾಗತಕ್ಕೆ ತುತ್ತೂರಿ, ಡ್ರಮ್ಸ್, ಶಾಸ್ತ್ರೀಯ ವಾದ್ಯಗಳು ಮೊಳಗಿದವು. ಅವುಗಳ ಮನಾಕರ್ಷಕ ನಾದಗಳ ನಡುವೆ ಪೋಪರು ತೆರೆದ ಜೀಪಿನಲ್ಲಿ ನಿಂತು ಮೈದಾನವನ್ನು ಸುತ್ತುತ್ತಾ ಸಾಗುತ್ತಾ ನೆರೆದ ಜನರನ್ನು ಆಶೀರ್ವದಿಸಿ ಬಳಿಕ ವೇದಿಕೆ ಹತ್ತಿದರು.
ಈ ಐತಿಹಾಸಿಕ ಘಟನೆಯ ಪ್ರಮುಖ ರೂವಾರಿ ಮಂಗಳೂರಿನ ಬಿಷಪ್ ಬಾಸಿಲ್ ಎಸ್. ಡಿ’ಸೋಜಾ ಅವರು ಪೋಪ್ ಅವರನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಬಜ್ಪೆಯ ಧರ್ಮಗುರುಗಳಾದ ಫಾದರ್ ಜೆ.ಜೆ.ಸಲ್ಡಾನ್ಹಾ, ಸಹಾಯಕ ಫಾದರ್ ವಿಕ್ಟರ್ ಡಿಸೋಜ ಮತ್ತಿತರ ಹಿರಿಯ ಧಾರ್ಮಿಕ ಮುಖಂಡರು, ಪೋಪರ ಅಂಗರಕ್ಷಕರು ಉಪಸ್ಥಿತರಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪೋಪ್ ಅವರು ಮೊತ್ತಮೊದಲು ಕರ್ನಾಟಕದ ಆಡುಭಾಷೆ ಕನ್ನಡದಲ್ಲಿ ‘ಪಿತನ ಸುತನ ಮತ್ತು ಪವಿತ್ರ ಆತ್ಮನ ನಾಮದಲ್ಲಿ’ ಎಂದು ಕ್ರೈಸ್ತ ಧರ್ಮದ ನಂಬಿಕೆಯ ದೇವರ ಮೂರು ವ್ಯಕ್ತಿತ್ವಗಳಾದ ತ್ರೀದೇವರನ್ನು ಒಂದೇ ದೇವರಾಗಿ ಒಪ್ಪಿಕೊಂಡು ಸ್ಮರಿಸುವ ವಾಕ್ಯವನ್ನುಚ್ಚರಿಸಿದರು. ‘ಈಶ್ವರನಲ್ಲಿ ವಿಶ್ವಾಸ ಇರುವವರು ಧನ್ಯರು’ ಎಂದಾಗ ಜನರು ಭಕ್ತಿಪರವಶರಾದರು. ‘ಈ ದಿನ ಕರ್ನಾಟಕದ ಮಂಗಳೂರು ನಗರದಲ್ಲಿ ನಿಮ್ಮ ಮಧ್ಯೆ ಹಾಜರಾಗಿ ನಿಮ್ಮನ್ನು ಕಾಣಲು ನನಗೆ ತುಂಬಾ ಸಂತೋಷ ಆಗುತ್ತಿದೆ. ಎಂದಾಗ ಜನರು ಆನಂದತುಂದಿಲರಾಗಿ ಹರ್ಷೋದ್ಗಾರ ಮಾಡಿದರು.
ಕೊಂಕಣಿಯಲ್ಲಿ ‘ನಮಾನ್ ಜಾಂವ್ ಜೆಜು ಕ್ರಿಸ್ತಾಕ್ …. ಸೊಮಿಯಾನ್ ಆಮ್ಚ್ಯಾ ಮಧೆಂ ವಿಶೇಸ್ ಕಾರ್ಯಾಂ ಕೆಲ್ಯಾಂತ್. ತೊ ತುಮ್ಚಾ ಕುಟುಂಬಾಂಕ್ ಆನಿ ರಾಷ್ಟ್ರಾಚಾ ಕಾರ್ಯಾಂಚೆರ್ ಆಶೀರ್ವಾದಿಸುಂದಿ. ಸತ್ ಮೋಗ್ ಎಕ್ವಟ್ ಆಸೊಂದಿ, ಸಮೆಸ್ತಾಂಕ್ ದೆವಾಚೆಂ ಬೆಸಾಂವ್’ ಎಂದು ಜನರಿಗೆ ಆಶೀರ್ವಾದ ಮಾಡಿದಾಗ ಜನರು ಭಾವಪರವಶರಾದರು. ಬಳಿಕ ಇಂಗ್ಲೀಷ್
ನಲ್ಲಿ ಮಾತನಾಡಿದ ಅವರು, ಮನುಕುಲಕ್ಕೆ ಜೀಸಸ್ ಕ್ರೈಸ್ಟ್ ಮಾಡಿದ ನಿಸ್ವಾರ್ಥ ಸೇವೆಯನ್ನು ಸ್ಮರಿಸಿದರು. ಭಾರತದ ಪ್ರಗತಿಯ ಬಗ್ಗೆ ಹೇಳಿದರು. ಭಾರತದಲ್ಲಿ ಕ್ರಿಶ್ಚಿಯನ್ ಸಮುದಾಯದ ಕೆಲಸಗಳನ್ನು ಶ್ಲಾಘಿಸಿದರು,
ತದನಂತರ ಧಾರ್ಮಿಕ ಮುಖಂಡರು ಇಂಗ್ಲಿಷ್, ಕನ್ನಡ, ತುಳು ಮತ್ತು ಕೊಂಕಣಿ ಭಾಷೆಗಳಲ್ಲಿ ಪ್ರಾರ್ಥನೆಯನ್ನು ನಡೆಸಿದರು. ಸಂಜೆ 4 ಗಂಟೆಗೆ ಮಗದೊಮ್ಮೆ ಪೋಪ್ ಮಾತನಾಡಿದರು…. ‘ಮಂಗಳೂರಿಗೆ ಬಂದು ನಾನು ತುಂಬಾ ಆನಂದಗೊಂಡಿದ್ದೇನೆ, ನಿಮ್ಮೆಲ್ಲರನ್ನು ದೇವರು ಹರಸಲಿ’ ಎಂದರು. ಗಾಯಕರು ಸ್ತುತಿಗೀತೆಗಳನ್ನು ಹಾಡಿದರು. ಪೋಪ್ ಕೊನೆಯ ಬಾರಿಗೆ ಜನರನ್ನು ಆಶೀರ್ವದಿಸಿದಾಗ, ‘ಪೋಪ್ ಚಿರಾಯುವಾಗಲಿ…. Long Live Paapaa’ ಎಂಬ ನಾಲ್ಕೈದು ಲಕ್ಷ ಜನರ ಘಂಟಾಘೋಷಗಳು ಮುಗಿಲು ಮುಟ್ಟಿದವು. ಹೀಗೆ ಅಂದಿನ ಭವ್ಯ ಘಟನೆ ಮುಕ್ತಾಯವಾದಾರೂ ಎಲ್ಲರ ಹೃದಯಗಳಲ್ಲಿ ಸೆರೆಯಾಗಿ ಹೋಗಿತ್ತು,
ಅಂದು ಈ ಐತಿಹಾಸಿಕ ಘಟನೆಗೆ ಧಾರ್ಮಿಕ ಮುಖಂಡರೊಂದಿಗೆ ಸೇರಿ ಹಗಲು ರಾತ್ರಿ ಬಹುವಾಗಿ ಶ್ರಮಿಸಿದವರಲ್ಲಿ ಮುಖ್ಯರು ನಮ್ಮ ಬಜ್ಪೆಯ Late Sri Gratian Arouza Pai, Late Sri Alfred D’cunha, Sri John Moras, Sri Vincent Pinto ಅವರನ್ನು ನೆನೆಯಲೇ ಬೇಕಾಗಿದೆ. ಪೋಪರು ಬಜ್ಪೆಯ ವೇದಿಕೆಯಲ್ಲಿ ಆಡಿದ ಕನ್ನಡ ಮಾತುಗಳು Late Sri Alfred D’cunha ರಿಂದ ರೆಕಾರ್ಡಿಂಗ್ ಆಗಿ ರೋಮ್ ತಲುಪಿ ಇಲ್ಲಿ ಪೋಪರಿಂದ ಹೇಳಲ್ಪಟ್ಟವುಗಳಾಗಿವೆ.
ಪೋಪರ ಈ ಭೇಟಿಗಾಗಿ ಮಂಗಳೂರು ಧರ್ಮಪೀಠವು ಭಾರತ ಮತ್ತು ಕರ್ನಾಟಕ ಸರಕಾರಗಳ ಸಹಯೋಗದೊಂದಿಗೆ ಆಯೋಜಿಸಿದ ವ್ಯವಸ್ಥೆಗಳನ್ನು ಜನರು ಬಹುವಾಗಿ ಮೆಚ್ಚಿಕೊಂಡರು. 30 ಸಾವಿರ ಜನಸಂದಣಿ ಇದ್ದರೇ ನೂಕುನುಗ್ಗಲಿನಿಂದ ಸಾಯುವ, ಗಾಯಗೊಳ್ಳುವ ವ್ಯವಸ್ಥೆ ಇಂದು ನಮ್ಮದು. ಸಮರ್ಥವಾಗಿ ನಾಲ್ಕೈದು ಲಕ್ಷ ಜನರನ್ನು ನಿಭಾಯಿಸಿದ ಹೆಮ್ಮೆ ಅಂದು ನಮ್ಮದು. ಶಿಸ್ತುಬದ್ಧ ವಾಹನ ಪಾರ್ಕಿಂಗ್ ವ್ಯವಸ್ಥೆ, ಸರ್ಕಾರಿ ಬಸ್ ಸೌಲಭ್ಯಗಳು, ರಕ್ತನಿಧಿಗಳು, ಆಂಬ್ಯುಲೆನ್ಸ್‌ಗಳು ವೈದ್ಯಕೀಯ ಸೌಲಭ್ಯಗಳು, ಪರವಾನಗಿ ಪಡೆದ ಆಹಾರ ಕೌಂಟರ್‌ಗಳು ಕುಡಿಯುವ ನೀರಿನ ಸೌಲಭ್ಯ, ಛಾಯಾಗ್ರಾಹಕರು ಪತ್ರಿಕಾ ಮಾಧ್ಯಮಗಳಿಗೆ ಪ್ರತ್ಯೇಕ ಗ್ಯಾಲರಿಗಳು, ಜನರಿಗೆ ಸರಿಯಾದ ಮಾಹಿತಿ ಮತ್ತು ಮಾರ್ಗದರ್ಶನ ನೀಡಲು ತರಬೇತಿ ಪಡೆದ ಸ್ವಯಂಸೇವಕರು, ಬಾಂಬ್ ಮತ್ತು ಸ್ಫೋಟಕಗಳನ್ನು ಪತ್ತೆಹಚ್ಚುವ ಪರಿಣತರು ಮತ್ತು ಮೆಷೀನರಿಗಳು, ಬಿಗಿಭದ್ರತಾ ವ್ಯವಸ್ಥೆ, ಏನುಂಟು ಏನಿಲ್ಲ ಎಲ್ಲಾ ಸೌಲಭ್ಯಗಳನ್ನು ಮಾಡಲಾಗಿತ್ತು.
ಹರಿಯುವ ಪ್ರವಾಹದಂತೆ ಕಾಣುವ ಚಲಿಸುವ ಜನಸಮೂಹವನ್ನು ನಿಯಂತ್ರಿಸುವುದು ಪೊಲೀಸರಿಗೆ, ಸ್ವಯಂಸೇವಕರಿಗೆ ದೊಡ್ಡ ಸವಾಲಾಗಿದ್ದರೂ ಅವರುಗಳು ತಮ್ಮ ಕಾರ್ಯಾಚರಣೆಯನ್ನು ಅತ್ಯುತ್ತಮ ಅತ್ಯುತ್ಕೃಷ್ಟ ರೀತಿಯಲ್ಲಿ ನಿರ್ವಹಿಸಿದ್ದರು. ಜನರು ಪೋಪರ ದರ್ಶನಗೈದು ಕೃತಾರ್ಥರಾದರು. ಎತ್ತರದ ವೇದಿಕೆ ಮೇಲೆ ಪೋಪ್ ನಿಂತಿದ್ದರೂ ಅತ್ಯಂತ ದೂರದಲ್ಲಿದ್ದವರ ಕಣ್ಣಿಗೆ ಪೋಪ್ ಕಂಡದ್ದು ಅತೀ ಸಣ್ಣ ಆಕೃತಿಯಿಂದಷ್ಟೇ. ವೇದಿಕೆಯಿಂದ ಅತ್ಯಂತ ದೂರದಲ್ಲಿದ್ದ 10ನೇ ತರಗತಿಯ ಪುಟ್ಟ ಬಾಲಕಿಯಾದ ನಾನು ವೇದಿಕೆಯ ಮೇಲೆ ಅಚ್ಚಬಿಳಿ ಉಡುಪುಗಳ ನಡುವೆ ಮಾಮ್ಮಿ ತೋರಿಸಿದ ಬಿಳಿ ನಿಲುವಂಗಿಯ ಮೇಲೆ ಕೆಂಪು ಶಾಲು ಇಳಿಬಿಟ್ಟಿದ್ದ ಪಿಂಕ್ ಪಿಂಕ್ ಮುಖ ಒಂದನ್ನು ಕಂಡು ಅವರೇ ಪೋಪರು ಎಂದು ಅರಿತೆ. ಹತ್ತಿರದಿಂದ ನೋಡಲಾಗದಕ್ಕಾಗಿ ಪರಿತಪಿಸಿದೆ. ಆದರೂ ಕಣ್ಣುಗಳು ಸೆರೆಹಿಡಿದ ಅವರ ಮುಖಾರವಿಂದವು ಇಂದಿಗೂ ಹೃದಯದಲ್ಲಿ ನೆಲೆಯಾಗಿದೆ.
ಪೋಲೆಂಡ್ ನ ಬಡ ಕುಟುಂಬದಲ್ಲಿ 1920 ರಲ್ಲಿ ಜನಿಸಿದ ಅವರ ಮೂಲ ಹೆಸರು Karol Józef Wojtyła ಎಂಬುದಾಗಿತ್ತು. 20 ನೇ ವಯಸ್ಸಿನಲ್ಲಿ ತಮ್ಮ ತಾಯಿ, ಸಹೋದರ ಮತ್ತು ತಂದೆಯನ್ನು ಕಳೆದುಕೊಂಡ ಅವರು ಜೀವನದಲ್ಲಿ ಬಹಳ ಕಷ್ಟಗಳನ್ನು ಎದುರಿಸಿದರು. ಸೋವಿಯತ್ ಮತ್ತು ನಾಝಿ ಆಡಳಿತಗಳ ಆಕ್ರಮಣದಲ್ಲಿ ಅವರು ದಬ್ಬಾಳಿಕೆಯ ಅಡಿಯಲ್ಲಿ ಬದುಕುವುದು ಎಂದರೇನು ಎಂದು ನೇರವಾಗಿ ತಿಳಿದಿದ್ದರಿಂದ ಬದುಕಿನ್ನುದ್ದಕ್ಕೂ ಶೋಷಿತರಿಗಾಗಿ ಮಿಡಿಯುವ ಸಹೃದಯಿಯಾದರು . ಬಾಲ್ಯ ಹಾಗೂ ಯೌವನಾವಸ್ಥೆಯಲ್ಲಿ ಎದುರಿಸಿದ ತೊಂದರೆಗಳ ನಡುವೆಯೂ ಅವರು ಭಗವಂತನಲ್ಲಿ ತಮ್ಮ ನಂಬಿಕೆಯನ್ನು ಕಳೆದುಕೊಳ್ಳಲಿಲ್ಲ. ಬಹುಶಃ, ಇದೇ ವಿಧಿ ಅವರನ್ನು ಪವಿತ್ರ ಜೀವನವನ್ನು ಆಯ್ಕೆ ಮಾಡಲು ಮಾರ್ಗದರ್ಶನ ನೀಡಿತು. ಅವರು ಪಾದ್ರಿ, ಸಹಾಯಕ ಬಿಷಪ್, ಆರ್ಚ್‌ಬಿಷಪ್, ಕಾರ್ಡಿನಲ್ ತದನಂತರ ಅಂತಿಮವಾಗಿ ಪವಿತ್ರ ಪೋಪ್ ಆಗಿ ಪೋಪ್ ಜೋನ್ ಪಾಲ್ II ಎಂದು ಧಾರ್ಮಿಕ ಸಾಂಪ್ರದಾಯ ಪ್ರಕಾರ ಪುನರ್ ನಾಮಕರಣಗೊಂಡರು.
ಪೋಪ್ ಜಾನ್ ಪಾಲ್ II ಒಬ್ಬ ಮಹಾನ್ ಮಾನವತಾವಾದಿ, ಶಾಂತಿಪ್ರಿಯ ಧಾರ್ಮಿಕ ನಾಯಕ. ಅವರ ಬದುಕು ಒಂದೇ ಧರ್ಮಕ್ಕೆ ಸೀಮಿತವಾಗಿ ಇರಲಿಲ್ಲ. ಧಾರ್ಮಿಕ ಗುರು ಆಗಿ ಅವರು ಮೆರೆಯಲಿಲ್ಲ. ನಮ್ಮ ರಾಷ್ಟ್ರಕವಿ ಕುವೆಂಪು ಕನಸು ಕಂಡ ವಿಶ್ವಮಾನವರಾದರು. ಅವರು ಜಗತ್ತಿನಾದ್ಯಂತ ಸಂಚರಿಸಿ ಶಾಂತಿಗಾಗಿ ಕರೆ ನೀಡಿದರು. ಯುದ್ಧ ಪೀಡಿತ ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆಗೆ ಶ್ರಮಿಸಿ ‘ಕ್ಷಮೆ’ಯ ಮಹತ್ವವನ್ನು ಬೋಧಿಸಿದರು. ರಾಜಕೀಯ ದಬ್ಬಾಳಿಕೆ, ಹಿಂಸಾಚಾರಗಳ ವಿರುದ್ಧ ನಿರಂತರವಾಗಿ ಧ್ವನಿ ಎತ್ತಿದರು. ಮಾನವ ಹಕ್ಕುಗಳ ಪರ ಹೋರಾಟ ಮಾಡಿದರು. Papal Foundation ಮೂಲಕ ಪ್ರಪಂಚದಾದ್ಯಂತ ಬಡವರು, ಅನಾರೋಗ್ಯ ಪೀಡಿತರು ಮತ್ತು ಆಶ್ರಯವಿಲ್ಲದವರಿಗೆ ಲಕ್ಷಾಂತರ ಡಾಲರ್ ಮಾನವೀಯ ನೆರವು ನೀಡಿದರು. ವಿವಿಧ ಧರ್ಮಗಳ ನಡುವೆ ಸೌಹಾರ್ದತೆಯನ್ನು ಮೂಡಿಸಲು ಶ್ರಮಿಸಿದರು. ಕ್ಯಾಥೋಲಿಕ್ ಚರ್ಚ್‌ನ ಇತಿಹಾಸದಲ್ಲೇ ಅತೀ ಹೆಚ್ಚು ಪ್ರಯಾಣಿಸಿದ ಪೋಪ್ ಆಗಿ 129 ದೇಶಗಳನ್ನು ಸಂದರ್ಶಿಸಿ ಅಲ್ಲಿಯ ಸ್ಥಳೀಯ ಭಾಷೆಗಳಲ್ಲಿ ಮಾತನಾಡಿ ಜನರ ಪ್ರೀತಿಗೆ ಪಾತ್ರರಾದರು. ಜಾಗತಿಕ ಮಟ್ಟದಲ್ಲಿ ಎಲ್ಲ ಧರ್ಮೀಯರ ಜನಪ್ರೀತಿ ಗಳಿಸಿದ ವ್ಯಕ್ತಿಯಾದರು. ಹೋದಲ್ಲೆಲ್ಲ ಯುವಜನರ ಮೇಲೆ ಪ್ರಭಾವ ಬೀರಿದ ಅವರು ಯುವಜನರನ್ನು ‘ಭರವಸೆಯ ಆಶಾಕಿರಣಗಳು’ ಎಂದು ಕರೆದು, ಅವರನ್ನು ಸಮಾಜಸೇವೆಗೆ ಉತ್ತೇಜಿಸುತ್ತಿದ್ದರು. ಅವರ ಪರಂಪರೆ ಮತ್ತು ಸೇವೆಗಳು ಚರಿತ್ರೆಯಲ್ಲಿ ಇಂದಿಗೂ ಜೀವಂತವಾಗಿವೆ. ಅಮರವಾಗಿ ಉಳಿಯುತ್ತವೆ.
ಯೇಸುಕ್ರಿಸ್ತರೊಂದಿಗೆ ಬಾಳಿ ಬದುಕಿ, ಆತನ ಪ್ರೀತಿಯ ಶಿಷ್ಯನಾಗಿ ತರವಾಯ ಪೋಪ್ ಆಗಿ ರೋಮನ್ ಕ್ಯಾಥೋಲಿಕ್ ಧರ್ಮಪೀಠಕ್ಕೆ 34 ಪರುಷ ಸುದೀರ್ಘಕಾಲ ಸೇವೆ ಸಲ್ಲಿಸಿದ ಮೊತ್ತಮೊದಲ ಪೋಪ್…. ಸಂತ ಪೀಟರ್, ತರುವಾಯ 31 ವರುಷ ಸೇವೆ ಮಾಡಿದ ಪೋಪ್ ಪಿಯಸ್ IX, ಅವರ ನಂತರ 3 ನೇಯವರಾಗಿ ಅತ್ಯಂತ ಸುಧೀರ್ಘ ಅಂದರೆ 26 ವರುಷಗಳ ಕಾಲ ಪೋಪ್ ಆಗಿ ಧಾರ್ಮಿಕ ಸೇವೆ ಸಲ್ಲಿಸಿದವರು ಪೋಪ್ ಜೋನ್ ಪಾವ್ಲ್ II. ಕೇವಲ ವರುಷಗಳ ಲೆಕ್ಕದಲ್ಲಿ ಮಾತ್ರವಲ್ಲ, ಬದುಕಿನುದ್ದಕ್ಕೂ ಧರ್ಮಗಳನ್ನು ಮೀರಿ ಮಾನವೀಯತೆ ತೋರಿ ಇತಿಹಾಸದಲ್ಲಿ ಚಿರಸ್ಥಾಯಿಯಾದರು.
ಅವರ ಮಾನವೀಯತೆಗೆ ಒಂದು ಉದಾಹರಣೆ…. ಪೋಪ್ ಜಾನ್ ಪಾಲ್ II ಅವರ ಮೇಲೆ 1981 ರಲ್ಲಿ ವ್ಯಾಟಿಕನ್‌ನ ಸೇಂಟ್ ಪೀಟರ್ಸ್ ಸ್ಕ್ವೇರ್‌ನಲ್ಲಿ ಟರ್ಕಿಯ ಮೆಹ್ಮೆತ್ ಅಲಿ ಅಕ್ಕಾ ಎಂಬಾತ ಗುಂಡು ಹಾರಿಸಿ ಹತ್ಯೆಗೆ ಪ್ರಯತ್ನಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವಕ್ಕೆ ಒಳಗಾಗಿ ಬಳಿಕ ಅದೆಷ್ಟೋ ಸಮಯದ ತರುವಾಯ ಚೇತರಿಸಿಕೊಂಡರು. ಆದರೆ ಕೆಲವರುಷಗಳ ನಂತರ ಜೈಲಿಗೆ ಭೇಟಿ ನೀಡಿ ಆ ಕಟುಕ ಆಕ್ರಮಣಕಾರನನ್ನು ಕ್ಷಮಿಸಿ ಮಾನವೀಯತೆ ಮೆರೆದರು. ಸರಕಾರ ಒಪ್ಪದಿದ್ದರೂ ಪೋಪ್ ಅವರ ಕೋರಿಕೆಯ ಮೇರೆಗೆ ಇಟಾಲಿಯನ್ ಅಧ್ಯಕ್ಷರು ಆತನನ್ನು ಬಿಡುಗಡೆ ಮಾಡಿ ಟರ್ಕಿಗೆ ಗಡೀಪಾರು ಮಾಡಿದರು.
ಇಂದು ಭಾರತ ಮಾತ್ರವಲ್ಲ ಜಗತ್ತು ಧರ್ಮದ್ವೇಷಗಳಿಂದ, ಜನಾಂಗೀಯ ದ್ವೇಷಗಳಿಂದ ಉಸಿರುಗಟ್ಟಿ ಧುಮುಗುಟ್ಟುತ್ತಿದೆ. ಬದುಕು ಭಯಾಗ್ರಸ್ತವಾಗಿದೆ. ಪೋಪ್ ಅಂಥವರು ಬದುಕಿರಬೇಕು ಅನಿಸುತ್ತದೆ. ಇಂಥವರು ಮರಳಿ ಹುಟ್ಟಬೇಕು ಅನಿಸುತ್ತದೆ. ಅಂತೆಯೇ ನಮ್ಮ ಪ್ರಧಾನ ಮೋದಿಯವರು ಪೋಪರಂತ ಮನಸ್ಥಿತಿಯವರಾಗಿದ್ದರೇ, ಭಾರತ ಹೇಗಿರುತ್ತಿತ್ತು ಅನಿಸುತ್ತದೆ. ಅಂಧಭಕ್ತರಿಂದ ಬಿಟ್ಟಿಯಾಗಿ ವಿಶ್ವಗುರು ಪಟ್ಟ ಪಡೆಯುವುದಕ್ಕಿಂತ ಮಾನವೀಯ ಸೇವೆಗಳಿಂದ ವಿಶ್ವಗುರು ಆಗುವುದು ಲೇಸು. ದೇಶದ ನೆಪದಲ್ಲಿ 2014 ರಿಂದ 97 ಕ್ಕೂ ಹೆಚ್ಚು ವಿಶ್ವಪರ್ಯಾಟನೆ ಮಾಡಿರುವ, ಈಗಲೂ ಮಾಡುತ್ತಿರುವ ಪ್ರವಾಸಪ್ರಿಯ ಮೋದಿಯವರು ಎಂದೂ ಧರ್ಮಗಳನ್ನು ಮೀರಿದ ಮಾನವತವಾದಿಯಾಗಲಿಲ್ಲ. ಇನ್ನು ಆಗುವುದೂ ಇಲ್ಲ.
2005 ರಲ್ಲಿ ಪೋಪರ ದೇಹಾಂತ್ಯವಾದರೂ, ತಮ್ಮ ವಿಶೇಷ ಶಕ್ತಿ ಪ್ರಭೆ ತೇಜಸ್ಸಿನಿಂದ ಮತ್ತುಅಸಾಧಾರಣ ನಾಯಕತ್ವ, ಜಾಗತಿಕ ಸಮರ ಅಂತ್ಯಗಳಲ್ಲಿನ ಪಾತ್ರ, ಅಷ್ಟೇ ಅಲ್ಲ, ದೃಢೀಕರಿಸಲ್ಪಟ್ಟ 2 ಪವಾಡಗಳಿಗಾಗಿ ಕ್ಯಾಥೋಲಿಕ್ ಪರಮಪೀಠದಿಂದ 2014 ಏಪ್ರಿಲ್ 27 ರಂದು ಅತ್ಯುನ್ನತ SAINT ಪದವಿಯನ್ನೂ ಪಡೆದ ಮಹಾನ್ ವ್ಯಕ್ತಿಯಾಗಿ ಎಲ್ಲರ ಮನೆಮನೆಗಳಲ್ಲಿ ಆ ಸಂತ ನೆಲೆಸಿದ್ದಾರೆ…. ಗೋಡೆಗಳಿಗೆ ತೂಗುಬಿಟ್ಟ, ಟೇಬಲ್ ಮೇಲೆ ಇರಿಸಲ್ಪಟ್ಟ ಭಾವಚಿತ್ರಗಳ ಫಲಕಗಳಲ್ಲಿ ಕಣ್ಣುಗಳಿಗೆ ಜೀವಂತ ವ್ಯಕ್ತಿಯಾಗಿ ಕಾಣುತ್ತಿದ್ದಾರೆ.
ಇದೀಗ…. ಅಂದು ಸರ್ವಧರ್ಮದವರನ್ನು ಹತ್ತಿರ ತಂದ ಜಗದ್ಗುರು ಪೋಪರ ಆಗಮನವಾಗಿ 40 ವರುಷಗಳು ಆಗುತ್ತಿದೆ. ಕರ್ನಾಟಕಕ್ಕೆ ಭೇಟಿ ನೀಡಿದ ಅವರು ಮಂಗಳೂರಿನ ಬಜ್ಪೆಯ ನೆಲದಲ್ಲಿ ಇಂದಿಗೂ ನೆಲೆ ನಿಂತಿದ್ದಾರೆ….ದೇಗುಲ ಒಂದರಲ್ಲಿ ಆ ಪುಣ್ಯಪುರುಷರು ಪ್ರತಿಷ್ಠಾಪಿಸಲ್ಪಟ್ಟಿದ್ದಾರೆ. ಪೋಪ್ ಭೇಟಿಯ ಕೆಲ ಸಮಯದ ತರುವಾಯ ಮಂಗಳೂರಿನ ಪ್ರತಿಷ್ಠಿತ ಕಟ್ಟಡ ನಿರ್ಮಾಣ ಕಂಪೆನಿ Abhiman Constructions ಮಾಲಕ ಮನ್ ಮೋಹನ್ ಮಲ್ಲಿಯವರು ಪೋಪ್ ಬಂದಿಳಿದ ಜಾಗದಲ್ಲಿ ಸ್ವಲ್ಪ ಪಾಲನ್ನು ಅಲ್ಲಿಯ ಕೃಷಿಕರಿಂದ ಖರೀದಿಸಿ ಆ ಜಾಗವನ್ನು Abhiman Layout ಮಾಡಿದರು.
ಮಂಗಳೂರು ಧರ್ಮಪೀಠದವರ ಕೋರಿಕೆ ಮೇರೆಗೆ ಆ ಹಿಂದೂ ಬಾಂಧವರು 7 ಸೆಂಟ್ಸ್ ಜಮೀನನ್ನು ಧರ್ಮಾರ್ಥವಾಗಿ ಪೋಪ್ ದೇಗುಲಕ್ಕಾಗಿ ನೀಡಿ ಔದಾರ್ಯ ಮೆರೆದರು. ಇಂದು ಅವರಿಲ್ಲ ಆದರೆ ಅವರ ಹೃದಯವಂತಿಕೆಯನ್ನು ಸಮಸ್ತ ಕ್ರೈಸ್ತ ಸಮುದಾಯಯ ನೆನಪಿನಲ್ಲಿಟ್ಟುಕೊಂಡಿದೆ. ಅಲ್ಲಿಯ ಕೃಷಿಕರೂ ತಮ್ಮ ಜಾಮೀನನ್ನು ದೇಗುಲಕ್ಕಾಗಿ ನೀಡಿದರು.
ಪೋಪರ ಹೆಸರಿನಲ್ಲಿ ಅದೇ ಸ್ಥಳದಲ್ಲಿ ದೇಗುಲ ನಿರ್ಮಿಸಿ ಬಜ್ಪೆಯು ಇಂದಿಗೂ ಪೋಪರ ಐತಿಹಾಸಿಕ ಭೇಟಿಯನ್ನು ಸ್ಮರಿಸುತ್ತಿದೆ. 2016 ರಲ್ಲಿ ಮುಕ್ತಾಯಗೊಂಡು ಸಾರ್ವಜನಿಕರಿಗೆ ಮುಕ್ತವಾದ ದೇಗುಲವು ಆ ಮಹಿಮೆಯ ಸಂತರಿಗೆ ಗೌರವ ಅರ್ಪಿಸುತ್ತಿದೆ. 40 ವರುಷಗಳಾಗುವ ಆ ಸುಂದರ ದಿನದ ಸವಿನೆನಪನ್ನು ಈ ದಿನ ಬಜ್ಪೆಯ ಆ ದೇಗುಲದಲ್ಲಿ ಸಂಭ್ರಮಿಸಲಾಗುತ್ತಿದೆ. ಆ ಪ್ರಯುಕ್ತ ಮೊನ್ನೆ ಆದಿತ್ಯವಾರ ಫೆಬ್ರವರಿ 1 ರಂದು ಹೊರೆಕಾಣಿಕೆಗಳನ್ನು ಸ್ವೀಕರಿಸಲಾಯಿತು. ಹಿಂದೂ ಮುಸುಲ್ಮಾನ್ ಬಾಂಧವರಿಂದಲೂ ಹೊರೆ ಕಾಣಿಕೆಗಳು ಬಂದವು. ಅರೇರೇರೇ…. ಎಲ್ಲಿದೆ ಧರ್ಮದ್ವೇಷ ಎಂದು ಪ್ರಶ್ನಿಸುವಂತಾಯಿತು.
ಅಂದು ಭಾರತದ ಸರ್ವಧರ್ಮಗಳ ಜನರನ್ನು ಹತ್ತಿರ ತಂದ ಪೋಪ್ ಹೀಗೇ ಎಂದೆಂದೂ ಸಮಸ್ತ ಭಾರತದ ಜನರು ಇರುವಂತೆ ಮಾಡಲಿ. ಧರ್ಮಧರ್ಮಗಳ ಅಂಧತ್ವದಿಂದ ಪರಿತ್ಯಕ್ತರಾಗಿ ಜನರು, ಸಾಮರಸ್ಯ ಸೌಹಾರ್ದತೆಯಿಂದ ಸಹಬಾಳ್ವೆ ಮಾಡುವಂತೆ ಆ ಸಂತರು ಮನಸ್ಸಿಗೆ ಕೃಪೆ ನೀಡಲಿ. ಮತಾಂತರಗಳು ಎಂಬ ಸುಳ್ಳು ಭಯಗಳ ಹೊರತಾಗಿ ದೇಗುಲವು ಸರ್ವಧರ್ಮಗಳ ಜನರಿಗೆ ಶಾಂತಿ ಪ್ರೀತಿಯ ನೆಲೆಯಾಗಲಿ. ಅಂತೆಯೇ ಕ್ರೈಸ್ತ ಸಮುದಾಯದಿಂದ ವಿಭಜನೆಗೊಂಡು ಹೊಸ ಪಂಗಡ ರೂಪಿಸಿ ಯಾರೇ ಮತಾಂತರ ಮಾಡುತ್ತಿರಲಿ, ಅವರ ಮನಗಳು ಪರಿವರ್ತನೆಯಾಗಲಿ. ಮತಾಂತರ ತೊಲಗಲಿ.
ಧರ್ಮ ಮತ್ತು ದೇಶಗಳನ್ನು ಮೀರಿದ ಪೋಪರ ಶಾಂತಿ ಪ್ರೀತಿ ಎಲ್ಲರಿಗೂ ಮಾದರಿಯಾಗಲಿ. ಧರ್ಮದ ಅಂಧತ್ವವನ್ನು ತೊಡೆದು ಹಾಕಿ ಎಲ್ಲರನ್ನು ಹತ್ತಿರ ಹತ್ತಿರ ತರಲಿ. ದ್ವೇಷದಿಂದ ಶಿಲೆಗಳಾದ ಹೃದಯಗಳಲ್ಲಿ ಪ್ರೀತಿಯ ಚಿಲುಮೆ ಕಟ್ಟೆಯೊಡೆದು ಧುಮ್ಮಿಕ್ಕಲಿ. ಬಿಗಿದ ಹೃದಯಗಳು ಬಿರಿದ ಪುಷ್ಪಗಳಾಗಲಿ. ಸಮಸ್ತ ವಿಶ್ವದ ಕಲ್ಯಾಣ ಬಯಸುವ ಮನಸ್ಥಿತಿ ನಮ್ಮ ನಿಮ್ಮದಾಗಲಿ.

