ಚಿತ್ರದುರ್ಗ : ಆಕಸ್ಮಿಕವಾಗಿ ಕಾರು ಹೊತ್ತಿ ಉರಿದು ವ್ಯಕ್ತಿ ಸಜೀವ ದಹನವಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಅರಳೀಕಟ್ಟೆ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಸಿದ್ದೇಶ್ವರ್ (35) ಎಂದು ಗುರುತಿಸಲಾಗಿದೆ. ಟಾಟಾ ನೆಕ್ಸಾನ್ ಕಾರು ಹೊತ್ತಿ ಉರಿದಿದೆ. ಅದರೊಳಗೆ ಸಿಲುಕಿ ಸಿದ್ದೇಶ್ವರ್ ಸಜೀವವಾಗಿ ದಹನಗೊಂಡಿದ್ದಾರೆ. ಬೆಂಕಿ ಹೊಟ್ಟಿಕೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ. ಸಿದ್ದೇಶ್ವರ್ ಟಾಟಾ ನೆಕ್ಸಾನ್ ಕಾರಿನಲ್ಲಿ ಹಿರಿಯೂರಿನಿಂದ ಅರಳೀಕಟ್ಟೆಗೆ ಮರಳುತ್ತಿದ್ದರು. ಈ ವೇಳೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಕಾರು ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದೆ.
ಈ ಬಗ್ಗೆ ಐಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸೆಂಟ್ರಲ್ ಲಾಕ್ ಸಿಸ್ಟಮ್ಸ್ ಓಪನ್ ಆಗದ ಕಾರಣ ಉಸಿರುಗಟ್ಟಿದೆ. ನಂತರ ಕ್ಷಣಾರ್ಧದಲ್ಲಿ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದ್ದು, ನೋಡನೋಡ್ತಿದ್ದಂತೆ ಸಿದ್ದೇಶ್ವರ್ ಸಜೀವ ದಹನವಾಗಿದ್ದಾರೆ.
ಸಿದ್ದೇಶ್ವರ್ ಕುಟುಂಬಸ್ಥರಿಗೆ ವಿಷಯ ಮುಟ್ಟಿಸಲಾಗಿದೆ. ಮನೆಮಗನನ್ನು ಕಳೆದುಕೊಂಡು ಕುಟುಂಬ ಕಂಗಾಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಹಸ್ತಾಂತರ ಮಾಡಲಾಗಿದೆ. ಅಗ್ನಿಯ ತೀವ್ರತೆಗೆ ಇಡೀ ದೇಹ ಸಂಪೂರ್ಣ ಸುಟ್ಟು ಕರಕಲಾಗಿದೆ.ಸ್ಥಳೀಯ ಪೊಲೀಸರು ಘಟನೆಗೆ ನಿಖರ ಕಾರಣದ ಬಗ್ಗೆ ತನಿಖೆ ಕೈಗೊಂಡಿದ್ದು, ಪ್ರಕರಣ ದಾಖಲಾಗಿದೆ.

