ಚಿಕ್ಕಮಗಳೂರು : ಎಸ್ಟೇಟ್ ವೊಂದರಲ್ಲಿ ಮರ ಕಟಾವು ಮಾಡುವಾಗ ಆಕಸ್ಮಿಕವಾಗಿ ಕೆಳಗೆ ಬಿದ್ದು ಕಾರ್ಮಿಕರೊಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯ ನೆರಡಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಲಿಂಗಪ್ಪ ಎಂದು ಗುರುತಿಸಲಾಗಿದ್ದು, ಇವರು ಎಸ್ಟೇಟ್ನಲ್ಲಿ ಕೆಲಸ ಮಾಡುತ್ತಿದ್ದಾಗ ಸುಮಾರು 30 ಅಡಿ ಎತ್ತರದಿಂದ ಕಾಲು ಜಾರಿ ಬಿದ್ದು ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ದುರ್ಘಟನೆಗೆ ತೋಟದ ಮಾಲೀಕ ದಯಾನಂದ ಶೆಟ್ಟಿ ಅವರ ನಿರ್ಲಕ್ಷ್ಯವೇ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಕೆಲಸದ ವೇಳೆ ಕಾರ್ಮಿಕರಿಗೆ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಮತ್ತು ಮರ ಹತ್ತಲು ಬೇಕಾದ ಸೂಕ್ತ ಸುರಕ್ಷತಾ ಸಲಕರಣೆಗಳನ್ನು ನೀಡದೆ ಮರಗಸಿ ಮಾಡುವಂತೆ ಮಾಲೀಕರು ಒತ್ತಾಯಿಸಿದ್ದರು ಎಂದು ಮೃತರ ಅಳಿಯ ಪೂರ್ಣೇಶ್ ಅವರು ಆಲ್ದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರಿನ ಅನ್ವಯ ಪೊಲೀಸರು ತೋಟದ ಮಾಲೀಕನ ವಿರುದ್ಧ ಎಫ್.ಐ.ಆರ್ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

