ಚಿಕ್ಕಬಳ್ಳಾಪುರ: ತಾಯಿಯೊಬ್ಬಳು ಒಂದು ವರ್ಷದ ಮಗುವನ್ನು ಆಸ್ಪತ್ರೆಯ ತೊಟ್ಟಿಲಲ್ಲಿ ಬಿಟ್ಟು ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.
ಮಗುವನ್ನು ತೊಟ್ಟಿಲಲ್ಲಿ ಹಾಕಿ ಹೋಗುತ್ತಿರುವ ದೃಶ್ಯ ಆಸ್ಪತ್ರೆಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಾಕೆ ಮಗು ಬಿಟ್ಟು ಕ್ಷಣಾರ್ಧದಲ್ಲೇ ಮಾಯವಾಗಿದ್ದಾಳೆ.
ಮಗು ಅಳುವುದನ್ನು ಕಂಡು ಆಸ್ಪತ್ರೆಯ ಸಿಬ್ಬಂದಿ ತಾಯಿಗಾಗಿ ಹುಡುಕಾಟ ನಡೆಸಿ, ಅಕ್ಕಪಕ್ಕದವರನ್ನು ವಿಚಾರಿಸಿದ್ದಾರೆ. ಬಳಿಕ ಸಿಸಿಟಿವಿಯಲ್ಲಿ ಪರಿಶೀಲನೆ ನಡೆಸಿದಾಗ ತರಾತುರಿಯಲ್ಲಿ ಬರುವ ಮಹಿಳೆ ಅತ್ತಿಂದಿತ್ತ ಕಣ್ಣಾಡಿಸಿ ಏಕಾಏಕಿ ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ, ಕಾಲ್ಕಿತ್ತಿದ್ದಾರೆ.
ಆಸ್ಪತ್ರೆ ಸಿಬ್ಬಂದಿ ಈ ಸಂಬಂಧ ಚಿಂತಾಮಣಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ್ವಯ ಪೊಲೀಸರು ಮಗುವಿನ ತಾಯಿಗಾಗಿ ಹುಡುಕಾಟ ನಡೆಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

