ಚಾಮರಾಜನಗರ: ಜಿಲ್ಲೆಯಲ್ಲಿನ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕೆಲಸ ವಿಳಂಬ ಕುರಿತು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ, ಹನೂರು, ಕುದೇರಿನಲ್ಲಿರುವ ಸಬ್ ರಿಜಿಸ್ಟಾರ್ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿರುವ ಕುರಿತು ಲೋಕಾಯುಕ್ತಕ್ಕೆ ದೂರು ಬಂದ ಹಿನ್ನೆಲೆಯಲ್ಲಿ ಏಕ ಕಾಲದಲ್ಲಿ ಎಲ್ಲ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅಲ್ಲಿನ ಕಾರ್ಯ ವೈಖರಿಗಳ ಕುರಿತು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಚಾಮರಾಜನಗರದ ತಾಲೂಕು ಕಚೇರಿಯಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿಗೆ ದಾಳಿ ಮಾಡಿದ ಲೋಕಾಯುಕ್ತ ಡಿವೈಎಸ್ಪಿ ಗಜೇಂದ್ರ ಪ್ರಸಾದ್ ತಂಡ ಕಚೇರಿಯಲ್ಲಿನ ಕಡತಗಳನ್ನು ಪರಿಶೀಲಿಸಿತು. ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳ ವಿಳಂಬದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ತಂಡ ಕಂಪ್ಯೂಟರ್‌ಗಳನ್ನು ಪರಿಶೀಲಿಸಿದರು.

ಕಚೇರಿಯಲ್ಲಿ ಬಾಕಿ ಇರುವ ಸಾರ್ವಜನಿಕರ ಕೆಲಸಗಳ ಕುರಿತು ಮಾಹಿತಿ ಪಡೆದು ವಿಳಂಬವಾದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದರು. ಕಂಪ್ಯೂಟರ್, ಕಡತಗಳನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲಿಸಿದರು.