ಚಾಮರಾಜನಗರ : ಹುಲಿ ದಾಳಿಗೆ ಕುರಿಗಾಹಿ ಮಹಿಳೆ ಬಲಿಯಾಗಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಣಾ ಪ್ರದೇಶದ ಕಾಡಂಚಿನ ಗ್ರಾಮ ದೇಶಿಪುರ ಕಾಲೋನಿಯಲ್ಲಿ ನಡೆದಿದೆ.

ಪುಟ್ಟಮ್ಮ(40) ಮೃತ ದುರ್ದೈವಿ. ಗುಂಡ್ಲುಪೇಟೆ ತಾಲ್ಲೂಕಿನ ಓಂಕಾರ ವಲಯದ ದೇಶೀಪುರ ಕಾಲೋನಿಯಲ್ಲಿ ನಿನ್ನೆ ಸಂಜೆ ವೇಳೆ ಗ್ರಾಮದ ಹೊರ ವಲಯದಲ್ಲಿ ಕುರಿ ಮೇಯಿಸುತ್ತಿದ್ದಾಗ ಮಹಿಳೆ ಮೇಲೆ ಹುಲಿ ದಾಳಿ ನಡೆಸಿದೆ. ಕುತ್ತಿಗೆ ಹಿಡಿದು ಅರಣ್ಯದೊಳಗೆ ಹುಲಿ ಎಳೆದೋಯ್ದಿದೆ.

ಕುರಿಗಳು ಮನೆಗೆ ಬಂದು ಕುರಿಗಾಹಿ ಪುಟ್ಟಮ್ಮ ಬಾರದೆ ಇದ್ದ ಕಾರಣ ಕುಟುಂಬಸ್ಥರು ಹುಡುಕಾಡಿದ್ದಾರೆ. ಗ್ರಾಮದ ಹೊರ ಭಾಗದ ಕಾಡಿನೊಳಗೆ ಮೃತ ದೇಹ ಪತ್ತೆಯಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಗೆ ಸ್ಥಳೀಯರು ಮಾಹಿತಿ ತಿಳಿಸಿದ್ದಾರೆ.

ತಕ್ಷಣ ಸ್ಥಳಕ್ಕೆ ಅರಣ್ಯ ಇಲಾಖೆ ಎಸಿಎಫ್ ಸುರೇಶ್, ಆರ್ ಎಫ್ ಓ ಸತೀಶ್ ಸಿಬ್ಬಂದಿ ವರ್ಗ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುದ್ದಿ ತಿಳಿದ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಿಂಧ್ಯಾ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಹುಲಿ ದಾಳಿಯಿಂದಾಗಿ ಭ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಸೂಕ್ತ ಪರಿಹಾರಕ್ಕಾಗಿ ಗ್ರಾಮಸ್ಥರು ‌ಒತ್ತಾಯಿಸಿದ್ದಾರೆ.