ಚಾಮರಾಜನಗರ: ನಾನೀಗ ರಾಜಕಾರಣದ ಕೊನೆಗಾಲದಲ್ಲಿದ್ದು,ರಾಜಕಾರಣದಲ್ಲಿ ಜನರ ಪ್ರೀತಿ ವಿಶ್ವಾಸ ಹಾಗೂ ಅಭಿಮಾನಗಳಿಸಿ ಜನಪ್ರೀಯವಾದರೆ ರಾಜಕಾರಣದಲ್ಲಿ ಉಳಿಗಾಲವಿಲ್ಲ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಸೆಳೆದಿದ್ದಾರೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಗ್ರಾಮದಲ್ಲಿ ಮಾಜಿ ರಾಜ್ಯಪಾಲ ಬಿ.ರಾಚಯ್ಯರವರ ಅಳಿಯ ನಿವೃತ್ತ ಪೊಲೀಸ್ ಮಹಾನಿರೀಕ್ಷಕ ಎಸ್ ಮರಿಸ್ವಾಮಿ ರವರು ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿಗಳು ಸೇರಿ ಸರ್ಕಾರಿ ಶಾಲೆಯನ್ನು ಮಾದರಿ ಹೈಟೆಕ್ ಶಾಲೆಯನ್ನಾಗಿಸಿದ್ದನ್ನು ಲೋಕಾರ್ಪಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವೀಗ ರಾಜಕಾರಣದ ಕೊನೆಗಾಲದಲ್ಲಿದ್ದೇನೆ ಎಂದು ಹೇಳುವ ಮೂಲಕ ಹಲವಾರು ಪ್ರಶ್ನೆಗಳಿಗೆ ಸಾಕ್ಷಿಯಾದರು.

ಮೈಸೂರು ಜಿಲ್ಲೆಯಲ್ಲಿ ವಿಲೀನವಾಗಿದ್ದ ಚಾಮರಾಜನಗರ ಜಿಲ್ಲೆಯನ್ನು 1997ರಲ್ಲಿ ನೂತನ ಜಿಲ್ಲೆಯನ್ನಾಗಿ ಮಾಡಿದ ವೇಳೆ ಮುಖ್ಯಮಂತ್ರಿಯಾಗಿದ್ದ ಜೆ.ಹೆಚ್. ಪಟೇಲರು ಜಿಲ್ಲಾ ಕೇಂದ್ರಕ್ಕೆ ತೆರಳದೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಜಿಲ್ಲೆಯನ್ನು ಉದ್ಘಾಟಿಸಿದ್ದರು. ಆದರೆ ಅಂದು ಉಪ ಮುಖ್ಯಮಂತ್ರಿಯಾಗಿದ್ದ ನಾನು, ಮಾಜಿ ರಾಜ್ಯಪಾಲ ಬಿ.ರಾಚಯ್ಯರವರು, ಅಂದು ಶಾಸಕರಾಗಿದ್ದ ಹೆಚ್.ಎಸ್. ಮಹದೇವಪ್ರಸಾದ್, ಎ.ಆರ್. ಕೃಷ್ಣಮೂರ್ತಿ, ವಾಟಾಳ್ ನಾಗರಾಜ್ ಸೇರಿ ಜಿಲ್ಲಾ ಕೇಂದ್ರದಲ್ಲಿ ಮತ್ತೊಮ್ಮೆ ಜಿಲ್ಲೆಯನ್ನು ಉದ್ಘಾಟಿಸಿದೆವು ಎಂದು ಹೇಳಿದರು.

ನಾನು ಮುಖ್ಯಮಂತ್ರಿಯಾಗಿ ಇದೂವರೆಗೂ ಸುಮಾರು 20 ಬಾರಿ ಚಾಮರಾಜನಗರಕ್ಕೆ ಬಂದಿದ್ದೇನೆ. ನಾನು ಚಾಮರಾಜನಗರಕ್ಕೆ ಬಂದಾಗಲೆಲ್ಲ ಅಧಿಕಾರ ಕಳೆದುಕೊಳ್ಳುವ ಬದಲು ಮುಖ್ಯಮಂತ್ರಿ ಕುರ್ಚಿ ಗಟ್ಟಿಯಾಗಿದೆ ಎಂದರು. ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಸರ್ಕಾರಿ ಶಾಲೆಯ ಹಳೆ ವಿದ್ಯಾರ್ಥಿಯೂ ಆಗಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಎಸ್ ಮರಿಸ್ವಾಮಿ ನೇತೃತ್ವದಲ್ಲಿ ಹಳೆ ವಿದ್ಯಾರ್ಥಿಗಳೆಲ್ಲ ಸೇರಿಕೊಂಡು ಶಾಲಾ ಕಟ್ಟಡ ನಿರ್ಮಾಣ ಮಾಡಿಸಿದ್ದಾರೆ.

ಬರೋಬ್ಬರಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಸರ್ಕಾರಿ ಶಾಲೆ ಕಟ್ಟಡ ನಿರ್ಮಾಣವಾಗಿದ್ದು, ಇದೀಗ ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದ್ದಾರೆ. 79 ವರ್ಷಗಳಷ್ಟು ಹಳೆಯದಾದ ಸತ್ತೇಗಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೀಗ ಖಾಸಗಿ ಶಾಲೆಗಳನ್ನೂ ಮೀರಿಸುವಂತೆ ಆಗಿದ್ದು, ಗಮನ ಸೆಳೆಯುತ್ತಿದೆ. ನಾನು ಅತ್ಯಂತ ಉತ್ಸಾಹದಿಂದ ನಾನು ಶಾಲೆಯನ್ನು ಉದ್ಘಾಟನೆ ಮಾಡಿದ್ದೇನೆ. ಜಾನಪದ ಕಲೆಗಳ ತವರೂರು ಹಾಗೂ ದಕ್ಷಿಣದ ಗಡಿ ಈ ಚಾಮರಾಜನಗರ ಎಂದು ಸಿಎಂ ಬಣ್ಣಿಸಿದರು.