ಗುಂಡ್ಲುಪೇಟೆ : ತಾಲೂಕಿನ ಕೂತನೂರು ಗ್ರಾಮಪಂಚಾಯತಿ ವ್ಯಾಪ್ತಿಯ ಮಲ್ಲಯ್ಯನಪುರ ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದಲೂ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದರೂ ಸಹ ಗ್ರಾಮಪಂಚಾಯತಿ ಆಡಳಿತ ಮಂಡಳಿ ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಮಲ್ಲಯ್ಯನಪುರ ಗ್ರಾಮದಲ್ಲಿ ಸಿಸಿ ಚರಂಡಿ ಕಾಮಗಾರಿ ಆರಂಭಿಸಿದ ಬಳಿಕ ನೀರಿನ ಸರಬರಾಜಾಗ್ತಿಲ್ಲ , ತ್ವರಿತವಾಗಿ ಚರಂಡಿ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿದ್ರೆ ಕುಡಿಯುವ ನೀರಿನ ಸಮಸ್ಯೆ ಎದುರಾಗ್ತಿರಲಿಲ್ಲ ಆದರೆ ಗ್ರಾಮಪಂಚಾಯತಿ ಆಡಳಿತ ಮಂಡಳಿ ಹಾಗೂ ಗುತ್ತಿಗೆದಾರನ ಉಡಾಫೆಯಿಂದ ಜನರು ಅನೇಕ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ.

ಚರಂಡಿ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿ ತಿಂಗಳುಗಳೇ ಕಳೆದರೂ ಸಹ ಪೂರ್ಣಗೊಂಡಿಲ್ಲ ಇತ್ತ ಮೂಲಸೌಕರ್ಯದ ಕೊರತೆ , ಮಳೆ ಬಂತೆಂದರೆ ಮನೆ ಮುಂಭಾಗವೇ ನೀರು ಕೆರೆಯಂತೆ ಶೇಖರಣೆಯಾಗುತ್ತಿದೆ ಇದರಿಂದ ಸಾಂಕ್ರಾಮಿಕ ರೋಗದ ಭೀತಿಯನ್ನ ಎದುರಿಸುವಂತಾಗಿದೆ ಎಂದು ದೂರಿದ್ದಾರೆ.