ಚಾಮರಾಜನಗರ : ತಾವು ವ್ಯಾಸಂಗ ಮಾಡುತ್ತಿರುವ ಶಾಲೆಗೆ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಿ ಎಂದು ವಿದ್ಯಾರ್ಥಿಗಳು ಕೈ ಮುಗಿದು ಬೇಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಶೆಟ್ಟಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಮುನಿಶೆಟ್ಟಿದೊಡ್ಡಿಯಲ್ಲಿ ಕಂಡು ಬಂದಿದೆ.

ಸ್ವಚ್ಛತೆ , ಶೌಚಾಲಯ ವ್ಯವಸ್ಥೆ ಮಕ್ಕಳಿಗಿರುವ ಮೂಲಭೂತ ಸೌಕರ್ಯಗಳ ಕುರಿತು ಜನಪ್ರತಿನಿಧಿಗಳು ಕೊಡುವ ಭರವಸೆ ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಿ ಹೋಗಿದೆ ಎಂಬುದು ಮುನಿಶೆಟ್ಟಿದೊಡ್ಡಿಯ ಶಾಲಾ ಪರಿಸ್ಥಿತಿಯನ್ನೊಮ್ಮೆ ಗಮನಸಿದರೆ ವಾಸ್ತವದ ಸತ್ಯ ದರ್ಶನವಾಗುತ್ತದೆ.

ಜ್ಞಾನದೇಗುಲದ ಭಂಡಾರವಾಗಿರುವ ಈ ಶಾಲೆಯ ಕೊಠಡಿಗಳು ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ತಲುಪಿವೆ, ಸುಮಾರು 20 ಮಕ್ಕಳ ಹಾಜರಾತಿ ಹೊಂದಿರುವ ಶಾಲೆಯಲ್ಲಿ ಮೂಲಭೂತ ಸೌಕರ್ಯದ ಕೊರತೆ , ಮಕ್ಕಳು ಬಯಲು ಶೌಚಾಲಯವನ್ನೇ ಅವಲಂಭಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಸ್ತುತವಾಗಿ ಶಾಲಾ ಶಿಕ್ಷಕರ ಕೊಠಡಿಯಲ್ಲಿ 7 ಮಕ್ಕಳು ಹಾಗೂ ದುರಸ್ತಿಗೆ ಬಂದಿರುವ ಕೊಠಡಿಯಲ್ಲಿ 13 ಮಕ್ಕಳು ಪಾಠ ಪ್ರವಚನ ಕಲಿಯಬೇಕಾದ ದುಸ್ಥಿತಿ ಎದುರಾಗಿದೆ.

ಶಾಲಾ ಮುಖ್ಯ ಶಿಕ್ಷಕರು ಗ್ರಾಮಪಂಚಾಯತಿಗೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಪತ್ರದ ಮೂಲಕ ಕೋರಿಕೊಂಡರು ಸಹ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ, ಮಕ್ಕಳ ಹಕ್ಕುಗಳ ಬಗ್ಗೆ ಮಾತನಾಡುವ ಅದೆಷ್ಟೋ ಮಂದಿ ಬಾಯಿ ಮುಚ್ಚಿಕೊಂಡಿರುವುದು ವಿಪರ್ಯಾಸದ ಸಂಗತಿ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಜೀವಿ ರಾಜ್ ಬೇಸರ ಹೊರಹಾಕಿದ್ದಾರೆ.

ಜಿಲ್ಲಾಡಳಿತ ಈ ಕೂಡಲೇ ಶಾಲೆಗೆ ಮೂಲಭೂತ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಕ್ಷೇತ್ರದ ಶಾಸಕ ಎಂ.ಆರ್.ಮಂಜುನಾಥ್ ಅವರು ಶಾಲಾ ಮಕ್ಕಳ ಮತ್ತು ಶಿಕ್ಷಕರ ಕೋರಿಕೆಯನ್ನ ಆಲಿಸಿ ಬಡ ಮಕ್ಕಳ ವಿದ್ಯಾರ್ಜನೆಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.