ಚಾಮರಾಜನಗರ: ನಗರದಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ಜಮಾಯಿಸಿ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದಿಂದ ಅರಣ್ಯ ಆದಿವಾಸಿಗಳಿಗೆ ಒಳ ಮೀಸಲಾತಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಯಿತು.
ಸಂಘದ ಕಾರ್ಯದರ್ಶಿ ಡಾ.ಸಿ.ಮಾದೇಗೌಡ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸಚಿವ ಸಂಪುಟ ಸಭೆ ಮಾಡಿ ಅನುಸೂಚಿತ ಜಾತಿಗಳಲ್ಲಿರುವ ಅಸಮಾನತೆಗಳನ್ನು ಹೋಗಲಾಡಿಸಲು ಒಳ ಮೀಸಲಾತಿಗಾಗಿ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ಆಯೋಗವನ್ನು ರಚಿಸಿ 3 ತಿಂಗಳಲ್ಲಿ ವರದಿ ನೀಡುವಂತೆ ಆದೇಶ ಹೊರಡಿಸಿದೆ.
ಆದರೆ 50 ಅನುಸೂಚಿತ ಪಂಗಡಗಳಿಗೆ ಒಳ ಮೀಸಲಾತಿ ನೀಡುವ ಕುರಿತು ಯಾವುದೇ ತೀರ್ಮಾನ ತೆಗೆದುಕೊಂಡಿರುವುದಿಲ್ಲ ಇದರಿಂದ 12 ಅರಣ್ಯ ಆದಿವಾಸಿ ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ ಆದ್ದರಿಂದ ಈ ಸಮುದಾಯಗಳಿಗೆ ಅನುಸೂಚಿತ ಪಂಗಡದಲ್ಲಿ ಶೇಕಡ 3%ರಷ್ಟು ಒಳ ಮೀಸಲಾತಿ ನೀಡಬೇಕೆಂದು ತಿಳಿಸಿದರು.
ನಂತರ ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಪ್ರತಿಭಟನೆ ಅಂತಿಮಗೊಳಿಸಿದರು. ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಯು.ರಂಗೇಗೌಡ, ಸಿ.ಕೋಣುರೇಗೌಡ, ವಿ.ಮುತ್ತಯ್ಯ, ಎಂ.ಜಡೆಸ್ವಾಮಿ, ದಾಸೇಗೌಡ, ಮಾದು, ಕೇತಮ್ಮ, ಮಹದೇವಮ್ಮ, ಶಿವಣ್ಣೇಗೌಡ ಸೇರಿದಂತೆ ಇತರರು ಭಾಗವಹಿಸಿದ್ದರು.

