ಚಾಮರಾಜನಗರ : ಮಲೆಮಹದೇಶ್ವರ ವನ್ಯಧಾಮದ ಹೂಗ್ಯಂ ವಲಯದ ಮೀಣ್ಯಂ ಅರಣ್ಯ ಪ್ರದೇಶದಲ್ಲಿ 5 ಹುಲಿಗಳ ನಿಗೂಢ ಸಾವು ಪ್ರಕರಣ ಸಂಬಂಧ ಹುಲಿಗಳು ವಿಷಪ್ರಾಶನದಿಂದಲೇ ಮೃತಪಟ್ಟಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
8 ವರ್ಷ ವಯಸ್ಸಿನ ತಾಯಿ ಹುಲಿ ಹಾಗೂ 10 ತಿಂಗಳ ಮರಿ ಹುಲಿಗಳು ಮೃತಪಟ್ಟಿದ್ದು ಈ ಹುಲಿಗಳು ಮೃತಪಟ್ಟಿರುವ ಕೂಗಳತೆ ದೂರದಲ್ಲಿಯೇ ಹಸುವಿನ ಮೃತದೇಹ ಪತ್ತೆಯಾಗಿತ್ತು, ಇದರಿಂದಾಗಿ ಹಲವು ಅನುಮಾನಗಳು ವ್ಯಕ್ತವಾಗಿತ್ತು.
ಈಗಾಗಲೇ 5 ಹುಲಿಗಳ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು ಮೃತ ಹುಲಿಗಳ ಅಂಗಾಂಗಗಳ ಮಾದರಿಗಳನ್ನು ಸಂಗ್ರಹಮಾಡಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಸಿದ್ಧತೆ ನಡೆಸಲಾಗಿದೆ. ಸರ್ಕಾರ ರಚಿಸಿರುವ ಉನ್ನತ ಮಟ್ಟದ ತನಿಖಾ ತಂಡ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ, ಈ ಸಂಬಂಧ ಸಿಸಿಎಫ್ ಹೀರಾಲಾಲ್ ಪ್ರತಿಕ್ರಿಯಿಸಿದ್ದು, ವಿಷಪ್ರಾಶನದಿಂದಲೇ ಹುಲಿಗಳು ಮೃತಪಟ್ಟಿದ್ದು ಹಸುವಿನಲ್ಲಿರುವ ವಿಷದ ಮಾಂಸ ತಿಂದು ಮೃತಪಟ್ಟಿದೆ. ಯಾವ ಪ್ರಮಾಣದ ವಿಷ ಎಂಬುದು ಲ್ಯಾಬ್ ವರದಿ ಮೂಲಕ ಗೊತ್ತಾಗಲಿದೆ. ಮೊದಲೇ ಹಸುವಿಗೆ ವಿಷಪ್ರಾಶನ ಮಾಡಲಾಗಿತ್ತ ಎಂಬುದು ಲ್ಯಾಬ್ ವರದಿ ಮೂಲಕ ಗೊತ್ತಾಗಲಿದೆ ಎಂದರು.
ಹಸುವಿನ ಎಲ್ಲ ಅಂಗಾಂಗಳನ್ನು ಲ್ಯಾಬ್ಗೆ ಕಳುಹಿಸಲಾಗಿದೆ. ಮೂರು ದಿನದ ಹಿಂದೆ ಈ ಸಾವು ಸಂಭವಿಸಿದೆ. ಇದಕ್ಕೆ ಯಾರು ಹೊಣೆಗಾರರು ಎಂಬುದನ್ನು ಇಲಾಖಾ ಮಟ್ಟದಲ್ಲಿ ಶನಿಖೆ ಮಾಡುತ್ತೇವೆ. ಹಸು ಯಾರದ್ದು ಎಂಬುದರ ಬಗ್ಗೆಯೂ ತನಿಖೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಹಲವರು ವಶಕ್ಕೆ : 5 ಹುಲಿಗಳ ನಿಗೂಢ ಸಾವು ಪ್ರಕರಣ ಸಂಬಂಧ ಸುತ್ತಮುತ್ತಲ ಗ್ರಾಮಗಳ ಕೆಲವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ಪ್ರತ್ಯೇಕವಾಗಿ ವಿಚಾರಣೆ ಮಾಡುತ್ತಿದ್ದಾರೆ. ಗಾಜನೂರು, ಕೊಪ್ಪ, ಮೇಣ್ಯಂ ಗ್ರಾಮಗಳ ಹಲದರನ್ನು ವಶಕ್ಕೆ ಪಡೆಯಲಾಗಿದೆ. ಈ ಗ್ರಾಮಗಳಲ್ಲಿಯೇ ಅರಣ್ಯ ಇಲಾಖೆಯ ಅಧಿಕಾರಿಗಳು ಬೀಡುಬಿಟ್ಟಿದ್ದಾರೆ.
ಅಲ್ಲದೇ ದನಗಾಹಿಗಳನ್ನು ಕೂಡ ಕರೆ ತಂದು ವಿಚಾರಣೆ ಹಸುವನ್ನು ವನ್ಯಪ್ರಾಣಿ ಕೊಂದಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಸ್ಥಳೀಯರು ವಿಷ ಹಾಕಿದ್ದಾರ ಅಥವಾ ಬೇಟೆಗಾರರು ಹುಲಿ ಬೇಟೆಯಾಡಲು ವಿಷಹಾಕಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಅಲ್ಲದೇ ಸತ್ತ ಹಸು ಯಾರದ್ದು ಎಂಬುದರ ಕುರಿತು ಅಧಿಕಾರಿಗಳು ವಿಚಾರಣೆ ಮಾಡುತ್ತಿದ್ದಾರೆ.
ಸಚಿವರು, ಶಾಸಕರ ಭೇಟಿ : ಹುಲಿಗಳು ಮೃತಪಟ್ಟಿರುವ ಸ್ಥಳಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಶಾಸಕ ಎಂ.ಆರ್.ಮಂಜುನಾಥ್, ಪಿಸಿಸಿಎಫ್ ಎನ್ಟಿಸಿಎ ಪ್ರತಿನಿಧಿ ಮಲ್ಲೇಶಪ್ಪ, ವನ್ಯಜೀವಿ ತಜ್ಞ, ಡಾ.ಸಂಜಯ್ ಗುಬ್ಬಿ ಸೇರಿದಂತೆ ಇತರರು ಭೇಟಿ ನೀಡಿ ಪರಿಶೀಲಿಸಿದರು.

