ಗುಂಡ್ಲುಪೇಟೆ : ಫೋಟೋ ಗೀಳಿಗಾಗಿ ಆನೆ ಸನಿಹಕ್ಕೆ ತೆರಳಿದ್ದ ಪ್ರಯಾಣಿಕರೋರ್ವನ ಮೇಲೆ ಒಂಟಿಯಾನೆ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಭಾನುವಾರ ಸಂಜೆ ಸಂಭವಿಸಿದೆ , ಇತ್ತ ಪ್ರಯಾಣಿಕನ ಹುಚ್ಚಾಟ ಕುರಿತಂತೆ ವನ್ಯಜೀವಿ ಪ್ರಿಯರು ಆಕ್ರೋಶ ಹೊರಹಾಕಿದ್ದಾರೆ.
ತಮಿಳುನಾಡಿನಿಂದ ಗುಂಡ್ಲುಪೇಟೆಗೆ ಬರುವ ಮಾರ್ಗಮದ್ಯೆ ರಸ್ತೆ ಬದಿಯಲ್ಲಿ ತನ್ನಷ್ಟಕ್ಕೆ ನಿಂತಿದ್ದ ಒಂಟಿಯಾನೆ ಸನಿಹಕ್ಕೆ ತೆರಳಿ ಫೋಟೋ ಕ್ಲಿಕ್ಕಿಸಲು ಮುಂದಾಗಿದ್ದ ಆಸಾಮಿಯನ್ನ ಅಟ್ಟಿಸಿಕೊಂಡು ಹೋಗಿದೆ.
ಈ ವೇಳೆ ಕೆಳಗೆ ಬಿದ್ದ ವ್ಯಕ್ತಿಯನ್ನ ಕಾಲಿನಿಂದ ಒದ್ದು ಅಲ್ಲಿಂದ ತೆರಳಿದೆ, ಅದೃಷ್ಟವಶಾತ್ ಸಣ್ಣ ಪೆಟ್ಟಿಗೊಳಗಾಗಿ ಪ್ರಾಣಾಪಾಯದಿಂದ ಪಾರಾದ ಆತನನ್ನ ಜೊತೆಯಲ್ಲಿದ್ದವರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಆನೆಗೆ ಕೀಟಲೆ ಮಾಡಿದ ವ್ಯಕ್ತಿ ಯಾರೆಂದು ತಿಳಿದುಬಂದಿಲ್ಲ ಆತನಿಗಾಗಿ ಪರಿಶೋಧನೆ ಮಾಡಲಾಗುತ್ತಿದೆ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಪ್ರಭಾಕರನ್ ತಿಳಿಸಿದ್ದಾರೆ.
ಇತ್ತೀಚಿಗೆ ವನ್ಯಜೀವಿಗಳಿಗೆ ಉಪದ್ರ ನೀಡುವ ಘಟನೆಗಳು ಸಾಕಷ್ಟು ಬಾರಿ ನಡೆದಿರುವ ಬಗ್ಗೆ ವರದಿಯಾಗಿದೆ, ಪ್ರಾಣಿಗಳ ಸ್ವಚ್ಛಂದ ವಿಹಾರಕ್ಕೆ ಪ್ರವಾಸಿಗರೆ ಅಡ್ಡಗಾಲಾಗುತ್ತಿರುವುದು ಇದೆ ಮೊದಲಲ್ಲ, ರಸ್ತೆ ಬದಿಯಲ್ಲಿ ಕಂಡಂತಹ ಪ್ರಾಣಿಗಳಿಗೆ ಕೀಟಲೆ ಮಾಡುವ ಕೆಲವರು ಹುಚ್ಚಾಟ ತೋರುತ್ತಿದ್ದಾರೆ ಇಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ.

