ಗುಂಡ್ಲುಪೇಟೆ : ಪರವಾನಗಿ ರಹಿತವಾಗಿ  ಬಿಳಿ ಕಲ್ಲು ಎಂಸ್ಯಾನ್ಡ್ ಸಾಗಿಸುತ್ತಿದ್ದ ಟಿಪ್ಪರ್ ಲಾರಿಗಳನ್ನ ಬೆನ್ನಟ್ಟಿದ ಗುಂಡ್ಲುಪೇಟೆ  ತೆರಕಣಾಂಬಿ ಪೊಲೀಸರು 11 ಕ್ಕೂ  ಲಾರಿಗಳ  ದಾಖಲೆ ಪರಿಶೀಲನೆ ಮಾಡಿ ರಾಜಧನ ದೋಖಾ ಹಾಗೂ ಅನುಮತಿ ಪಡೆಯದೆ ಖನಿಜ ಸಂಪತ್ತನ್ನ ಸಾಗಾಟ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆ ಲಾರಿಗಳನ್ನ ಜಪ್ತಿ ಮಾಡಿದ್ದಾರೆ.

ಚಾಮರಾಜನಗರ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಅವರ ಸೂಚನೆಯಂತೆ ಇಂದು ಮುಂಜಾನೆಯೇ ಕಾರ್ಯಚರಣೆಗಿಳಿದ ತೆರಕಣಾಂಬಿ ಸಬ್ ಇನ್ಸ್ಪೆಕ್ಟರ್ ಮಹೇಶ್ ಮತ್ತು ತಂಡ ಟಿಪ್ಪರ್ ಗಳ ಪರ್ಮಿಟ್ ಪರಿಶೀಲನೆ ನಡೆಸಿದಾಗ ರಾಯಲ್ಟಿ ಹಾಗೂ ಅನುಮತಿ ರಹಿತವಾಗಿ ಕಲ್ಲು ಸಾಗಣೆ ವಿಚಾರ ಬೆಳಕಿಗೆ ಬಂದಿದೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಅನಧಿಕೃತವಾಗಿ ಕಲ್ಲು ಮತ್ತು ಎಂಸ್ಯಾನ್ಡ್ ಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಪರಿಶೀಲನೆ ನಡೆಸಲು ಸೂಚನೆ ನೀಡಲಾಗಿದೆ ಅದರಂತೆ ಗಣಿ ನಿಯಮ ಉಲ್ಲಂಘನೆ ಕಂಡುಬಂದಿರುವ ಕಾರಣ ಲಾರಿಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ನಕಲಿ ತೂಕದ ರಶೀದಿ : ಪ್ರತಿನಿತ್ಯ ಗಡಿಭಾಗದ ಗಣಿಸಂಪತ್ತನ್ನ ಲೂಟಿ ಹೊಡೆಯುತ್ತಿರುವ ಕೇರಳ ಉದ್ಯಮಿಗಳು ಸರ್ಕಾರಕ್ಕೆ ನಿತ್ಯ ಲಕ್ಷಾಂತರ ರೂ ರಾಜಧನವನ್ನ ವಂಚಿಸುತ್ತಿದ್ದಾರೆ ಎಂಬುದಕ್ಕೆ ಪುರಾವೆಗಳು ಸಿಕ್ಕಿದರೂ ಸಹ ಸಂಬಂದಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಮೌನವಾಗಿರುವುದರ ಹಿಂದೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ.

ಪ್ರತಿನಿತ್ಯ ಗಣಿಸಂಪತ್ತನ್ನ ಲೂಟಿ ಹೊಡೆಯುವವರ ಜೊತೆ ಅಧಿಕಾರಿಗಳು ಶ್ಯಾಮಿಲಾಗಿದ್ದಾರೆ ಎಂದು ಪ್ರಜ್ಞಾವಂತರು ಆರೋಪಿಸಿದ್ದಾರೆ. ಪೊಲೀಸ್ ಇಲಾಖೆ ಕಾರ್ಯಚರಣೆಗಿಳಿದು ಟಿಪ್ಪರ್ ಗಳ ದಾಖಲೆಗಳನ್ನ ಪರಿಶೀಲಿಸಿ ಅನಧಿಕೃತವಾಗಿ ಬಿಳಿ ಕಲ್ಲು, ಎಂಸ್ಯಾನ್ಡ್ ಸಾಗಿಸುವ ಲಾರಿಗಳಿಗೆ ಕಾನೂನು ರೀತಿ ಕ್ರಮ ಕೈಗೊಳ್ಳುವುದಾದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗು ಆರ್ಟಿಓ ಅಧಿಕಾರಿಗಳ ಕರ್ತವ್ಯವೇನು ಎಂದು ರೈತ ಮುಖಂಡ ಮಾಡ್ರಹಳ್ಳಿ ಮಹದೇವಪ್ಪ ಪ್ರಶ್ನಿಸಿದ್ದಾರೆ.

ಮುಂಜಾನೆ ವೇಳೆ ಸರತಿ ಸಾಲಿನಲ್ಲಿ ಸಾಗುವ ಟಿಪ್ಪರ್ ಗಳು :  ದಿನಂಪ್ರತಿ ಮುಂಜಾನೆ ವೇಳೆಯಲ್ಲೇ ಕೇರಳ ಟಿಪ್ಪರ್ ಗಳ ಸದ್ದು ಹೆಚ್ಚಾಗಿರುತ್ತದೆ, ರಾಜಧನ, ರವಾನೆ ಅನುಮತಿರಹಿತವಾಗಿ ಖನಿಜ ಸಂಪತ್ತನ್ನ ನೆರೆ ರಾಜ್ಯಕ್ಕೆ ಕೊಂಡೊಯ್ಯುವ ಸುಲಭ ತಂತ್ರವನ್ನ ದಂದೇಕೋರರು ಮೈಗೂಡಿಸಿಕೊಂಡಿದ್ದಾರೆ, ಬೆಳೆಗ್ಗೆ ಸಂಧರ್ಭದಲ್ಲಿ ಆರ್ಟಿಓ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿರುವುದಿಲ್ಲ ಎಂಬುದನ್ನೇ ಬಂಡವಾಳ ಮಾಡಿಕೊಂಡಿರುವ ಕೇರಳ ಟಿಪ್ಪರ್ ಮಾಲೀಕರು ಸರಾಗವಾಗಿ ಬಿಳಿಕಲ್ಲು ಸಾಗಣೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯ : ಲೂಟಿಕೋರರಿಗೆ ಗಣಿ ಇಲಾಖೆ ನಿಯಮಾವಳಿಗಳು ಕಚೇರಿಯಲ್ಲಿನ ಕಡತಕಷ್ಟೇ ಸೀಮಿತವಾಗಿಬಿಟ್ಟಿದೆ, ಪಟ್ಟಭದ್ರ ಹಿತಾಶಕ್ತಿಗಳ ಮಧ್ಯಸ್ಥಿಕೆಯಿಂದ ಗಡಿಭಾಗದ ಗಣಿಸಂಪತ್ತು ಲೂಟಿಯಾಗುವ ಜೊತೆಗೆ ಸರ್ಕಾರಕ್ಕೆ ರಾಜಧನ ವಂಚನೆ ಆಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ, ಸರ್ಕಾರದ ಅಧಾಯದ ಬೊಕ್ಕಸಕ್ಕೆ ಸೇರಬೇಕಾದ ರಾಜಧನ ಇನ್ನಿತರ ಶುಲ್ಕಗಳು ಅಧಿಕಾರಿಗಳು ಜೇಬು ಸೇರುತ್ತಿರುವುದು ಇಂತಹ ದಂಧೆಗಳಿಗೆ ಅಡಿಗಲ್ಲಾಗಿ ಹೋಗಿದೆ.