ಚಾಮರಾಜನಗರ: ಭೀಮನ ಅಮವಾಸ್ಯೆ ಪ್ರಯುಕ್ತ ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಶ್ರೀ ಮಲೆ ಮಹದೇಶ್ವರ ಬೆಟ್ಟದ ದೇವಾಲಯದ ಆವರಣದಲ್ಲಿ ವಿವಿಧ ಬಗೆಯ ಫಲ ಪುಷ್ಪಗಳು ಹಾಗೂ ತರಕಾರಿಗಳಿಂದ ವಿಶೇಷ ಅಲಂಕಾರ ಮಾಡಲಾಗಿದೆ.

ಭೀಮನ ಅಮಾವಾಸ್ಯೆ ಪ್ರಯುಕ್ತ ಬುಧವಾರ ಎಣ್ಣೆ ಮಜ್ಜನ ಸೇವೆ ಸಂಪ್ರದಾಯದಂತೆ ವಿಶೇಷ ಪೂಜೆ ನೆರವೇರಿತು. ಗುರುವಾರ ಅಮಾವಾಸ್ಯೆಯ ಪೂಜೆಯಿದ್ದು ಬುಧವಾರ ಮುಂಜಾನೆಯಿಂದಲೇ ಹಾಲಿನ, ಅಭಿಷೇಕ, ಬಿಲ್ವಪತ್ರೆ , ಪಂಚಾಮೃತ ಅಭಿಷೇಕ ವಿಜೃಂಭಣೆಯಿಂದ ನೆರವೇರಿತು. ನೈವೇದ್ಯ ಅರ್ಪಿಸಿದ ನಂತರ ಪಡೆದ ಮಹಾ ಮಂಗಳಾರತಿ ಮಾಡಲಾಯಿತು.

ಮಹದೇಶ್ವರರಿಗೆ ಹೂವಿನ ಅಲಂಕಾರ: ಭೀಮನ ಅಮಾವಾಸ್ಯೆ ಪ್ರಯುಕ್ತ ಶ್ರೀ ಮಲೆ ಮಹದೇಶ್ವರ ದೇವಾಲಯದ ಒಳ ಆವರಣದಲ್ಲಿ ವಿವಿಧ ಬಗೆಯ ಫಲ ಪುಷ್ಪಗಳಿಂದ ವಿಶೇಷ ಅಲಂಕಾರ ಮಾಡಲಾಗಿದೆ. ತಮಿಳುನಾಡಿನ ಹೊಸೂರು ಗ್ರಾಮದ ಹೂವಿನ ವ್ಯಾಪಾರಿ ರೋಸ್ ಎನ್ ರಮೇಶ್, ಪ್ರತಿವರ್ಷದಂತೆ ಈ ವರ್ಷವೂ ಭೀಮನ ಅಮಾವಾಸ್ಯೆಗೆ ಹೂವಿನ ಅಲಂಕಾರ ಮಾಡಿದ್ದಾರೆ.

ಕಣ್ಮನ ಸೆಳೆಯುತ್ತಿರುವ ವಿದ್ಯುತ್ ದೀಪಾಲಂಕಾರ: ಭೀಮನ ಅಮಾವಾಸ್ಯೆ ಪ್ರಯುಕ್ತ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಒಳ ಹಾಗೂ ಹೊರ ಆವರಣದಲ್ಲಿ ವಿನೂತನ ಮಾದರಿಯ ವಿದ್ಯುತ್ ದೀಪಗಳನ್ನು ಅಳವಡಿಸಿರುವುದು ಭಕ್ತರ ಕಣ್ಮನ ಸೆಳೆಯುತ್ತಿದೆ. ರಾತ್ರಿ ವೇಳೆ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟ ಕೈಲಾಸ ಪರ್ವತದಂತೆ ಕಾಣಿಸುತ್ತಿದೆ.

ದಾಸೋಹ ಭವನದಲ್ಲಿ ಮೊಕ್ಕಂ ಹೂಡಿದ ಕಾರ್ಯದರ್ಶಿ: ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದ ಭೀಮನ ಅಮಾವಾಸ್ಯೆ ಗೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ಹಿನ್ನೆಲೆ ವಿಶೇಷ ಪ್ರಸಾದ ತಯಾರು ಮಾಡಲಾಗುತ್ತಿದೆ.ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಕ್ರಮವಹಿಸಲು ಭಕ್ತಾದಿಗಳಿಗೆ ನಿರಂತರವಾಗಿ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದ್ದು ಕಾರ್ಯದರ್ಶಿ ಎಇ ರಘು ದಾಸೋಹ ಭವನದಲ್ಲೀಯೇ ಮೊಕ್ಕಂ ಹೂಡಿದ್ದಾರೆ.

ಪ್ರಾಧಿಕಾರದ ವತಿಯಿಂದ ಬರುವಂತಹ ಲಕ್ಷಾಂತರ ಭಕ್ತಾದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ , ನೆರಳಿನ ವ್ಯವಸ್ಥೆ, ಶೌಚಾಲಯ, ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಇದಲ್ಲದೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇರುವುದರಿಂದ 2 ಲಕ್ಷ ಲಾಡು ಪ್ರಸಾದ ಶೇಖರಣೆ ಮಾಡಿಕೊಳ್ಳಲಾಗಿದೆ. ಇದಲ್ಲದೆ ತೀರ್ಥಪ್ರಸಾದ ಕಲ್ಲುಸಕ್ಕರೆ ಪ್ರಸಾದವನ್ನು ಹೆಚ್ಚಾಗಿ ತಯಾರು ಮಾಡಿ ಸಿದ್ಧಪಡಿಸಿಕೊಳ್ಳಲಾಗಿದೆ.