ಗುಂಡ್ಲುಪೇಟೆ : ಎಲ್ಲೆಲ್ಲೂ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ, ನವರಾತ್ರಿ ಹಬ್ಬದ ಪ್ರಯುಕ್ತ ಮನೆಗಳಲ್ಲಿ ದಸರಾ ಗೊಂಬೆಗಳ ಪ್ರದರ್ಶನ ಎಲ್ಲರನ್ನ ಆಕರ್ಷಿಸುತ್ತಿದೆ. ನವರಾತ್ರಿ ಗೊಂಬೆಗಳ ಪ್ರದರ್ಶನ ಮಹತ್ವಪಡೆದುಕೊಂಡಿದ್ದು ದೇವಾಲಯಗಳಲ್ಲಿ ಪೂಜಾ ಕೈಂಕರ್ಯ ನಡೆದರೆ ಇತ್ತ ಮನೆಗಳಲ್ಲಿ ಗೊಂಬೆಗಳ ಪ್ರದರ್ಶನ ಮನಸೂರಗೊಳ್ಳುತ್ತಿದೆ, ಗುಂಡ್ಲುಪೇಟೆ ಪಟ್ಟಣದ ಸುಬ್ಬುರಾವ್ ಎಂಬವರ ಮನೆಯಲ್ಲಿ ಗೊಂಬೆಗಳನ್ನ ಸಿಂಗಾರಗೊಳಿಸಿ ಎಲ್ಲರ ಕಣ್ಮನ ಸೆಳೆಯುವಂತೆ ಅಳವಡಿಸಲಾಗಿದೆ.

ಮೈಸೂರು ದಸರಾದಲ್ಲಿನ ಅಂಬಾರಿಯಲ್ಲಿ ಕಾಣಸಿಗುವ ಗೊಂಬೆಗಳು , ಮಹಾಭಾರತ ಕಥಾ ಭಾಗವನ್ನ ಸಾರುವ ಗೊಂಬೆಗಳು, ರಾಮಾಯಣದ ಸ್ಪಷ್ಟ ನಿದರ್ಶನವನ್ನ ಸಾರುವ ಗೊಂಬೆಗಳನ್ನ ಸುಬ್ಬುರಾವ್ ಅವರ ಮನೆಯಲ್ಲಿ ಪ್ರದರ್ಶನಕ್ಕಿಡಲಾಗಿದೆ. ಸುಂದರವಾಗಿ ಜೋಡಿಸಿರುವ ಗೊಂಬೆಗಳಿಗೆ ದೀಪಾಲಂಕಾರ ಮಾಡಲಾಗಿದೆ.

ಪ್ರತಿನಿತ್ಯ ಬೆಳೆಗ್ಗೆ ಸಂಜೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಸಂಜೆ ವೇಳೆಯಲ್ಲಿ ಮುತೈದೆಯರನ್ನ ಪೂಜೆಗೆ ಆಹ್ವಾನಿಸಿ ಮಡಿಲು ತುಂಬುವ ಜೊತೆಗೆ ಪ್ರಸಾದ ವಿನಿಯೋಗ ಇರುತ್ತದೆ. ನವರಾತ್ರಿ ಕೊನೆ ದಿನದವರೆಗೂ ಈ ಆಚರಣೆ ಸಾಂಘವಾಗಿ ನಡೆಯುತ್ತದೆ ಕೊನೆ ದಿವಸಕ್ಕೆ ಎಲ್ಲಾ ಗೊಂಬೆಗಳನ್ನ ತೆಗೆದು ಸುರಕ್ಷಿತವಾಗಿ ಎತ್ತಿಡಲಾಗುತ್ತದೆ.

ನನಗೀಗ 84 ವರ್ಷ ವಯಸ್ಸಾಗಿದೆ ಆದ್ರೆ ದಸರಾ ಹಾಗೂ ನವರಾತ್ರಿ ಹಬ್ಬದ ಸಂಧರ್ಭದಲ್ಲಿ ಈ ಗೊಂಬೆಗಳ ಪ್ರದರ್ಶನ ಮತ್ತು ಪೂಜಾ ಕೈಂಕರ್ಯ ಕಾರ್ಯವನ್ನ ನೆರವೇರಿಸಿಕೊಂಡು ಬರ್ತಿದ್ದೇವೆ, ಗೊಂಬೆಗಳನ್ನ ಅಲಂಕಾರಗೊಳಿಸಿ ವಿನೂತನವಾಗಿ ಪ್ರದರ್ಶನಕ್ಕಿಟ್ಟು ಆಚರಣೆ ಮಾಡ್ತೀವಿ ಅಂತ ಸುಬ್ಬುರಾವ್ ಅವರ ತಾಯಿ ವಿಜಯಲಕ್ಷ್ಮಿ ನವರಾತ್ರಿಯ ವಿಶೇಷತೆ ಕುರಿತು ತಿಳಿಸಿದ್ದಾರೆ. ನವರಾತ್ರಿ ಅಮಾವಾಸ್ಯೆ ದಿನದಂದು ಹಚ್ಚಿದ ನಂದಾದೀಪವನ್ನ ವಿಜಯ ದಶಮಿ ಮುಗಿಯುವತನಕ ಕೆಡದಂತೆ ನೋಡಿಕೊಳ್ತೇವೆ ಅಂತ ವಿಜಯಲಕ್ಷ್ಮಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.