ಗುಂಡ್ಲುಪೇಟೆ : ತಾಲೂಕಿನ ಬೀಮನಬೀಡು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಕುರಿತು ಮಾಹಿತಿ ನೀಡಿದ ರೈತ ಸಂಘದವರನ್ನು ಹೆಸರನ್ನು ಗೌಪ್ಯವಾಗಿಡದೆ ಬಹಿರಂಗ ಪಡಿಸಿದ್ದಾರೆ ಎಂದು ಆರೋಪಿಸಿ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಅಬಕಾರಿ ಇಲಾಖೆ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ತಾಲೂಕು ಕಚೇರಿಯಲ್ಲಿರುವ ಅಬಕಾರಿ ನಿರೀಕ್ಷಕರ ಇಲಾಖೆ ಮುಂದೆ ಜಮಾವಣೆಗೊಂಡ ರೈತ ಸಂಘಟನೆ ಪದಾಧಿಕಾರಿಗಳು ಅಬಕಾರಿ ಅಧಿಕಾರಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಭೀಮನಬೀಡು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಕುರಿತು ಮಾಹಿತಿ ನೀಡಿದ ರೈತ ಸಂಘದವರ ಹೆಸರನ್ನು ಗೌಪ್ಯತೆ ಕಾಪಾಡದೆ ಬಹಿರಂಗ ಪಡಿಸಿದ್ದಾರೆ. ಇದರಿಂದ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದವರು ಗ್ರಾಮದಲ್ಲಿ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸುತ್ತಿದ್ದಾರೆ. ಇದಕ್ಕೆ ಅಬಕಾರಿ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಆಕ್ರೋಶ ಹೊರ ಹಾಕಿದರು.
ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವುದರಿಂದ ಯುವ ಸಮೂಹ ಕುಡಿತದ ಚಟಕ್ಕೆ ಬಿದ್ದು ಜೀವನವನ್ನು ಹಾಳು ಮಾಡಿಕೊಳ್ಳುತ್ತಿದೆ. ಜೊತೆಗೆ ಸಂಸಾರಗಳು ಬೀದಿಗೆ ಬೀಳುವಂತಾಗಿದೆ. ಇದನ್ನು ಮನಗಂಡು ರೈತ ಸಂಘದವರು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮನವಿ ನೀಡಿ, ಅಕ್ರಮ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಕೋರಿಕೊಂಡರು ಸಹ ಅಧಿಕಾರಿಗಳು ಅಕ್ರಮ ಮದ್ಯ ಮಾರಾಟಗಾರರ ಜೊತೆಗೆ ಶಾಮೀಲಾಗಿ ಕೆಲಸ ಮಾಡುವ ಜೊತೆಹೆ ಮಾಹಿತಿ ದಾರರ ಹೆಸರನ್ನು ಬಹಿರಂಗ ಪಡಿಸಿದ್ದಾರೆ. ಇದರಿಂದ ಗ್ರಾಮದಲ್ಲಿ ಅಶಾಂತಿ ಉಂಟಾಗಿದೆ ಎಂದು ದೂರಿದರು.
ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಕೂಡಲೇ ಬಂಧಿಸಬೇಕು. ಜೊತೆಗೆ ಗ್ರಾಮದಲ್ಲಿ ಅವಾಚ್ಯ ಶಬ್ದದಿಂದ ನಿಂದಿಸುತ್ತಿರುವ ಮಹಿಳೆ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಸ್ಥಳಕ್ಕಾಗಮಿಸಿದ ಅಬಕಾರಿ ನಿರೀಕ್ಷಕರಾದ ದೀಪು ಪ್ರತಿಭಟನಾಕಾರರು ಮನವೊಲಿಸಿದರು ಪ್ರಯೋಜವಾಗಲಿಲ್ಲ. ನಂತರ ತಹಸೀಲ್ದಾರ ಟಿ.ರಮೇಶ್ ಬಾಬು ರೈತ ಮನವಿ ಆಲಿಸಿ, ಕೂಡಲೇ ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಜೊತೆಗೆ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಲಾಗುವುದು ಎಂದು ಭರವಸೆ ನೀಡಿದರು.

