ಚಾಮರಾಜನಗರ: ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ವಿಜ್ಞಾನಗಳ ಬೋಧನಾ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಭಾನುವಾರ ತಾಯಿ-ಮಗು ಮೃತಪಟ್ಟಿದ್ದಾರೆ.

ಚಾಮರಾಜನಗರ ತಾಲ್ಲೂಕಿನ ಚಂದಕವಾಡಿ ಹೋಬಳಿಯ ಬಸಪ್ಪನಪಾಳ್ಯ ಗ್ರಾಮದ ಭಾಗ್ಯ ಎಂಬುವವರನ್ನು ಹೆರಿಗೆಗಾಗಿ ಚಾಮರಾಜನಗರ ಸಿಮ್ಸ್ ಆಸ್ಪತ್ರೆಯ ತಾಯಿ-ಮಕ್ಕಳು ವಿಭಾಗಕ್ಕೆ ದಾಖಲಿಸಲಾಗಿತ್ತು. ಆಸ್ಪತ್ರೆಯ ವೈದ್ಯರಾದ ಸ್ವಾತಿ ನಾಯಕ್ ಅವರು ನಾರ್ಮಲ್ ಹೆರಿಗೆ ಆಗುತ್ತದೆ ಎಂದು ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ ಆದರೆ ಕೆಲವೇ ಕ್ಷಣದಲ್ಲಿ ಸಿಜರಿನ್ ಮೂಲಕ ಹೆರಿಗೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಆದರೇ ಹೆರಿಗೆಯ ವೇಳೆ ತಾಯಿ ಮತ್ತು ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ ಎಂದು ಮೃತರ ಪತಿ ಮಧು ಮಾಹಿತಿ ನೀಡಿದರು. ಸಿಮ್ಸ್ ಆಸ್ಪತ್ರೆಯಲ್ಲಿ ತಾಯಿ-ಮಗು ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಮೃತ ಬಾಣಂತಿಯ ಸಂಬಂಧಿಕರು ಆಸ್ಪತ್ರೆಯಲ್ಲಿ ಎದೆ ಬಡಿದುಕೊಂಡು ಅಳುತ್ತಿದ್ದ ದೃಶ್ಯಗಳು ನೆರೆದವರ ಮನಸ್ಸನ್ನು ಹಿಂಡಿತು. ಆಸ್ಪತ್ರೆಯಲ್ಲಿ ಇದ್ದವರೂ ಕೂಡ ವೈದ್ಯರ ನಿರ್ಲಕ್ಷ್ಯದ ವಿರುದ್ಧ ಬೇಸರ ಹೊರಹಾಕಿದರು. ಇಲ್ಲಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದಾದರೇ ಮೈಸೂರಿಗೆ ಕರೆದುಕೊಂಡು ಹೋಗಿ ಎಂದು ಹೇಳಬಹುದಿತ್ತು. ಆದರೇ ಅನ್ಯಾಯವಾಗಿ ತಾಯಿ-ಮಗುವನ್ನು ಸಾಯಿಸಿದರು ಎಂದು ಸಂಬಂಧಿಕರು ಆರೋಪಿಸಿದರು.